ಚಿಕ್ಕಮಗಳೂರು : ಅಂಬೇಡ್ಕರ್ ಅವರ ದೀಕ್ಷಾ ಭೂಮಿ ನಾಗಪುರಕ್ಕೆ ಸಮಾಜ ಕಲ್ಯಾಣ ಇಲಾಖೆ ಆಯೋಜಿಸಿರುವ ಪ್ರವಾಸದಲ್ಲಿ ತೆರಳುವವರಿಗೆ ಊಟ, ವಸತಿ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂದು ಜಿಲ್ಲಾ ನಾಗಪುರ ದೀಕ್ಷಾ ಭೂಮಿ ಯಾತ್ರಾ ಸಮಿತಿ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದೆ.
ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರನ್ನು ಇಂದು ಭೇಟಿ ಮಾಡಿದ ಸಮಿತಿಯ ಪದಾಧಿಕಾರಿಗಳು ಮತ್ತು ಯಾತ್ರಿಗಳು ಈ ಸಂಬಂಧ ಮನವಿ ಸಲ್ಲಿಸಿದರು.
ಇತ್ತೀಚೆಗೆ ಸಮಾಜಕಲ್ಯಾಣ ಇಲಾಖೆ ಆಯೋಜಿಸಿದ್ದ ಪ್ರವಾಸದಡಿ ಜಿಲ್ಲೆಯಿಂದ 90 ಜನ ಯಾತ್ರಿಕರು ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಎರಡು ಬಸ್‍ಗಳಲ್ಲಿ ನಾಗಪುರಕ್ಕೆ ತೆರಳಿದ್ದು, ಆ ವೇಳೆ ಸರಿಯಾದ ಊಟ, ತಿಂಡಿ ಮತ್ತು ಉಳಿದುಕೊಳ್ಳಲು ವ್ಯವಸ್ಥೆಯಿಲ್ಲದೆ ಪರದಾಡುವಂತಾಯಿತು ಎಂದು ಹೇಳಿದರು.
ನಾಗಪುರದಲ್ಲಿನ ಸ್ಥಳೀಯ ಭಾಷೆ ಬಾರದಿರುವುದರಿಂದಾಗಿ ಮತ್ತು ಪ್ರಯಾಣದ ಖರ್ಚಿಗೆ ಹಣವಿಲ್ಲದಿರುವುದರಿಂದಾಗಿ ತೊಂದರೆ ಅನುಭವಿಸುವಂತಾಯಿತು ಎಂದು ಅಳಲು ತೋಡಿಕೊಂಡರು.
ನಾಗಪುರದ ಪ್ರವಾಸಕ್ಕಾಗಿ ರಾಜ್ಯ ಸರ್ಕಾರ ಸಮಾಜ ಕಲ್ಯಾಣ ಇಲಾಖೆಗೆ ಪ್ರತಿ ಯಾತ್ರೆಗಾಗಿ ತಲಾ ಐದು ಸಾವಿರ ರೂ. ನೀಡುತ್ತದೆ ಅದರಲ್ಲಿ ಕೇವಲ ಮೂರು ಸಾವಿರ ರೂ ವಾಹನಕ್ಕೆ ತಗಲುತ್ತದೆ ಹಾಗಾಗಿ ಉಳಿದ ಎರಡು ಸಾವಿರ ರೂ ಗಳನ್ನು ಇಲಾಖೆ ಯಾತ್ರಿಕರಿಗೆ ನೀಡಬೇಕು ಎಂದು ಒತ್ತಾಯಿಸಿದರು.
ನಾಗಪುರ ದೀಕ್ಷಾಭೂಮಿಗೆ ತೆರಳುವ ಯಾತ್ರಿಕರಿಗೆ ಎಲ್ಲಾ ಮೂಲಭೂತ ಸೌಲಭ್ಯಗಳನ್ನೂ ಒದಗಿಸಬೇಕು ಬಸ್ ಗಳಲ್ಲಿ ಗೈಡ್ ಗಳನ್ನು ನಿಯೋಜಿಸಬೇಕು, ನಾಗಪುರಕ್ಕೆ ಹೋಗಿ ಬರುವ ದಾರಿಯಲ್ಲಿ ಬರುವ ಪ್ರೇಕ್ಷಣೀಯ ಸ್ಥಳಗಳನ್ನು ತೋರಿಸುವ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ತರೀಕೆರೆ ಎನ್.ವೆಂಕಟೇಶ್, ಯಾತ್ರಿಗಳಾದ ಹೆಚ್.ಎಂ.ಮಂಜುನಾಥ್, ಡಿ.ಕೆ.ಮಂಜುನಾಥ್, ಡಿ.ಎಂ.ರಾಮು, ಕೃಷ್ಣ, ಮಧು, ಹೆಚ್.ಎಸ್.ನಾಗರಾಜ್ ಹಾಜರಿದ್ದರು.










