ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ : ಮತ ಚಲಾಯಿಸಿದ ಸೋನಿಯಾ, ಖರ್ಗೆ, ಶಶಿ ತರೂರ್.

57
firstsuddi

ಬೆಂಗಳೂರು/ನವದೆಹಲಿ : ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಹಿನ್ನೆಲೆ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮತದಾನ ಮಾಡಿದ್ದಾರೆ. ನವದೆಹಲಿ ಕೇಂದ್ರ ಕಚೇರಿಗೆ ಆಗಮಿಸಿದ ಅವರು ಮತ ಚಲಾಯಿಸಿದರು.

ಮತದಾನಕ್ಕೂ ಮುನ್ನ ಮಾತನಾಡಿದ ಅವರು, ನಾನು ಬಹಳ ದಿನಗಳಿಂದ ಕಾಯುತ್ತಿದ್ದ ದಿನ ಇದು. ಇದೊಂದು ಐತಿಹಾಸಿಕ ದಿನ ಎಂದು ಬಣ್ಣಿಸಿದರು. ಸೋನಿಯಾಗಾಂಧಿ ಪುತ್ರಿ ಹಾಗೂ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ತಮ್ಮ ಮತವನ್ನು ಚಲಾಯಿಸಿದರು.

ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೀಯ ಚುನಾವಣೆ ಅಭ್ಯರ್ಥಿ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಇಂದು ಬೆಂಗಳೂರಿನಲ್ಲಿ ಮತದಾನ ಮಾಡಿದರು. ಮತದಾನಕ್ಕೂ ಮುನ್ನ ಮಾತನಾಡಿದ ಅವರು, ಇದು ನಮ್ಮ ಆತಂರಿಕ ಚುನಾವಣೆಯ ಒಂದು ಭಾಗವಾಗಿದೆ. ನಾವು ಒಬ್ಬರಿಗೊಬ್ಬರು ಏನೇ ಹೇಳಿದರೂ ಅದು ಸ್ನೇಹಪೂರ್ವಕವಾಗಿರುತ್ತದೆ. ಎಲ್ಲರೂ ಸೇರಿ ಪಕ್ಷ ಕಟ್ಟಬೇಕು. ತರೂರ್ ನನಗೆ ದೂರವಾಣಿ ಕರೆ ಮಾಡಿ ಶುಭ ಹಾರೈಸಿದರು. ನಾನು ಕೂಡ ಅವರಿಗೆ ಶುಭ ಕೋರಿದ್ದೇನೆ ಎಂದರು.

ಕೇರಳದ ಪಕ್ಷದ ಕಚೇರಿಯಲ್ಲಿ ಮತದಾನ ಮಾಡಿದ ಮತ್ತೊರ್ವ ಚುನಾವಣಾ ಅಭ್ಯರ್ಥಿ ಶಶಿ ತರೂರ್, ತಮಗೆ ಪ್ರಬಲ ಪೈಪೋಟಿ ಇದೆ ಅದಾಗ್ಯೂ ನನಗೆ ಗೆಲ್ಲುವ ವಿಶ್ವಾಸ ಇದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಖರ್ಗೆ ಜೊತೆಗೆ ನಾನು ಮಾತನಾಡಿದ್ದೇನೆ. ನಾವು ಸಹೋದ್ಯೋಗಿಗಳು ಮತ್ತು ಸ್ನೇಹಿತರು ಎಂದು ಹೇಳಿದರು.

ಇನ್ನು ಭಾರತ್ ಜೋಡೋ ಯಾತ್ರೆ ನೇತಾರ, ಕಾಂಗ್ರೆಸ್ ರಾಷ್ಟ್ರೀಯ ಮುಖಂಡ ರಾಹುಲ್ ಗಾಂಧಿ ಅವರು ಬಳ್ಳಾರಿಯ ಸಂಗನಕಲ್ಲು ವಿಶ್ರಾಂತಿ ತಾಣದಲ್ಲಿ ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣೆ ನಿಮಿತ್ತ ಇಂದು ಮತ ಚಲಾಯಿಸಿದರು.