ನವದೆಹಲಿ : ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ(ಬಿಸಿಸಿಐ) ನೂತನ ಅಧ್ಯಕ್ಷರಾಗಿ ಕನ್ನಡಿಗ ರೋಜರ್ ಬಿನ್ನಿ ನೇಮಕಗೊಂಡಿದ್ದಾರೆ.
ಸೌರವ್ ಗಂಗೂಲಿ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಬಿಸಿಸಿಐ ಅಧ್ಯಕ್ಷರಾಗಿ ಬಿನ್ನಿ ನೇಮಕಗೊಂಡಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ರೋಜರ್ ಬಿನ್ನಿ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಈ ಮೂಲಕ ರೋಜರ್ ಬಿನ್ನಿ ಬಿಸಿಸಿಐನ 36ನೇ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಜಯ್ ಶಾ 2ನೇ ಅವಧಿಗೆ ಬಿಸಿಸಿಐ ಕಾರ್ಯದರ್ಶಿಯಾಗಿ ಮುಂದುವರಿದಿದ್ದಾರೆ. ರಾಜೀವ್ ಶುಕ್ಲ ಬಿಸಿಸಿಐ ಉಪಾಧ್ಯಕ್ಷರಾಗಿ ನೇಮಕವಾಗಿದ್ದಾರೆ.
1955 ಜುಲೈ 19ರಂದು ಜನಿಸಿರುವ ರೋಜರ್ ಬಿನ್ನಿ 1979ರಿಂದ 1987ರವರೆಗೆ ಭಾರತ ಕ್ರಿಕೆಟ್ ತಂಡದ ಸದಸ್ಯರಾಗಿದ್ದರು. ಬಲಗೈ ಬ್ಯಾಟಿಂಗ್ ಶೈಲಿ ಮತ್ತು ಬಲಗೈ ಮಧ್ಯಮ ವೇಗದ ಬೌಲರ್ ಆಗಿದ್ದರು. ಈವರೆಗೆ 27 ಟೆಸ್ಟ್ ಪದ್ಯಗಳಲ್ಲಿ 830 ರನ್ ಗಳಿಸಿ, ಬೌಲಿಂಗ್ ನಲ್ಲಿ 47 ವಿಕೆಟ್ ಪಡೆದಿದ್ದಾರೆ.










