ಜಾನುವಾರುಗೆ ಡಿಕ್ಕಿ ಹೊಡೆದ ವಂದೇ ಭಾರತ್ ಎಕ್ಸ್‌ಪ್ರೆಸ್ – ತಿಂಗಳಲ್ಲಿ 3ನೇ ಬಾರಿ ಅಪಘಾತ…

72
firstsuddi

ಗಾಂಧೀನಗರ : ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಜಾನುವಾರುಗೆ ಡಿಕ್ಕಿ ಹೊಡೆದ ಪರಿಣಾಮ ರೈಲಿನ ಮುಂಭಾಗಕ್ಕೆ ಹಾನಿಯಾಗಿದೆ. ಮುಂಬೈ ಸೆಂಟ್ರಲ್ ವಿಭಾಗದ ಅತುಲ್ ಬಳಿ ಘಟನೆ ನಡೆದಿದ್ದು, ಈ ತಿಂಗಳಲ್ಲಿ ಮೂರನೇ ಬಾರಿ ವಂದೇ ಭಾರತ್ ರೈಲು ಅಪಘಾತಕ್ಕೊಳಗಾಗಿದೆ.

ರೈಲು ಮುಂಬೈ ಸೆಂಟ್ರಲ್ ನಿಂದ ಗಾಂಧಿನಗರಕ್ಕೆ ಪ್ರಯಾಣಿಸುತ್ತಿತ್ತು. ಈ ವೇಳೆ ಜಾನುವಾರುಗೆ ಡಿಕ್ಕಿಯಾಗಿ ದುರ್ಘಟನೆ ಸಂಭವಿಸಿದೆ. ಆದರೆ, ಯಾವುದೇ ದೊಡ್ಡ ಅನಾಹುತ ಸಂಭವಿಸಿಲ್ಲ. ರೈಲಿನಲ್ಲಿದ್ದ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಘಟನೆಯ ನಂತರ ರೈಲನ್ನು ಸುಮಾರು 15 ನಿಮಿಷಗಳ ಕಾಲ ತಡೆಹಿಡಿಯಲಾಯಿತು.

ಇದಕ್ಕೂ ಮೊದಲು ಈ ರೈಲು ಅಕ್ಟೋಬರ್ 6ರಂದು ಗಾಂಧಿನಗರದಿಂದ ಮುಂಬೈಗೆ ಪ್ರಯಾಣಿಸುತ್ತಿದ್ದಾಗ ಆನಂದ್ ನಿಲ್ದಾಣದಲ್ಲಿ ಹಸುವಿಗೆ ಡಿಕ್ಕಿ ಹೊಡೆದು ರೈಲಿನ ಮುಂಭಾಗ ಹಾನಿಗೊಳಗಾಗಿತ್ತು. ಆನಂದ್ ನಲ್ಲಿ ಹಸುವಿಗೆ ಡಿಕ್ಕಿ ಹೊಡೆಯುವ ಎರಡು ದಿನಗಳ ಹಿಂದೆ, ಈ ರೈಲು ಅಹಮದಾಬಾದ್ ಬಳಿಯ ವತ್ವಾದಲ್ಲಿ 4 ಎಮ್ಮೆಗಳಿಗೆ ಡಿಕ್ಕಿ ಹೊಡೆದಿತ್ತು. ಆಗಲೂ ರೈಲಿನ ಮುಂಭಾಗಕ್ಕೆ ಹಾನಿಯಾಗಿತ್ತು.