ಇಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮದಿನ ; ಏಕತಾ ಪ್ರತಿಮೆಗೆ ಮೋದಿ ಪುಷ್ಪ ನಮನ…

39
firstsuddi

ಅಹಮದಾಬಾದ್ : ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 147ನೇ ಜನ್ಮದಿನದ ನಿಮಿತ್ತ ಇಂದು ಕೆವಾಡಿಯಾದಲ್ಲಿರುವ ಏಕತಾ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ನಂತರ ಕೆವಾಡಿಯಾ ಪರೇಡ್ ಮೈದಾನದಲ್ಲಿ ನಡೆದ ರಾಷ್ಟ್ರೀಯ ಏಕತಾ ದಿನದ ಪರೇಡ್ ಕಾರ್ಯಕ್ರಮದಲ್ಲಿ ಪ್ರಧಾನಿ ಭಾಗವಹಿಸಿದ್ದರು.

ದೇಶದ ಏಕತೆಗಾಗಿ ಸರ್ದಾರ್ ವಲ್ಲಭಭಾಯಿ ಪಟೇಲ್ ನೀಡಿದ ಕೊಡುಗೆಯನ್ನು ಸ್ಮರಿಸಲು ಅವರ ಜನ್ಮದಿನವಾದ ಅಕ್ಟೋಬರ್ 31ರಂದು ‘ರಾಷ್ಟ್ರೀಯ ಏಕತಾ ದಿನ’ವನ್ನು ಆಚರಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2014ರಲ್ಲಿ ತೀರ್ಮಾನ ಕೈಗೊಂಡಿತ್ತು. ಅಂದಿನಿಂದ ಪ್ರತಿವರ್ಷ ಅಕ್ಟೋಬರ್ 31ರಂದು ದೇಶಾದ್ಯಂತ ‘ರಾಷ್ಟ್ರೀಯ ಏಕತಾ ದಿನ’ವನ್ನು ಆಚರಿಸಲಾಗುತ್ತದೆ.

2018ರ ಅಕ್ಟೋಬರ್ 31ರಂದು ಪ್ರಧಾನಿ ನರೇಂದ್ರ ಮೋದಿ ಅವರು ನರ್ಮದಾ ನದಿಯ ದಡದಲ್ಲಿ ಸರ್ದಾರ್ ಪಟೇಲ್ ಅವರ ಏಕತಾ ಪ್ರತಿಮೆಯನ್ನು ಉದ್ಘಾಟಿಸಿದರು. ಸುಮಾರು 2,989 ಕೋಟಿ ರೂ. ವೆಚ್ಚದಲ್ಲಿ ಈ ಪ್ರತಿಮೆಯನ್ನು ನಿರ್ಮಿಸಲಾಗಿದೆ. 182 ಮೀಟರ್ ಎತ್ತರವಿರುವ ಇದು ಪ್ರಸ್ತುತ ವಿಶ್ವದ ಅತಿ ಎತ್ತರದ ಪ್ರತಿಮೆಯಾಗಿದೆ.

ಸರ್ದಾರ್ ಪಟೇಲ್ 1875ರ ಅಕ್ಟೋಬರ್ 31ರಂದು ಗುಜರಾತ್ ನ ನಾಡಿಯಾಡ್ ನಲ್ಲಿ ಜನಿಸಿದರು. ಸ್ವಾತಂತ್ರ್ಯದ ಬಳಿಕ ಮೊದಲ 3 ವರ್ಷಗಳ ಕಾಲ ಸರ್ದಾರ್ ಪಟೇಲ್ ಅವರು ಉಪ ಪ್ರಧಾನಮಂತ್ರಿ, ಗೃಹ ಸಚಿವ ಹಾಗೂ ಮಾಹಿತಿ ಮತ್ತು ರಾಜ್ಯಗಳ ಸಚಿವಾಲಯದ ಸಚಿವರಾಗಿ ಕಾರ್ಯನಿರ್ವಹಿಸಿದರು. 1950ರ ಡಿಸೆಂಬರ್ 15ರಂದು ಮುಂಬೈನಲ್ಲಿ ಅವರು ನಿಧನರಾದರು.