ರಾಮನಗರ : ಕಂಚುಗಲ್ ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಮೂವರು ಆರೋಪಿಗಳನ್ನು ಆರು ದಿನಗಳ ಕಾಲ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.
ರಾಮನಗರ ಜಿಲ್ಲಾ ಪೊಲೀಸರು ಮಾಗಡಿ 1ನೇ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶರಾದ ಧನಲಕ್ಷ್ಮೀ ಎದುರು ಆರೋಪಿಗಳನ್ನು ಹಾಜರುಪಡಿಸಿದರು. ಆರೋಪಿಗಳನ್ನು 10 ದಿನಗಳ ಅವಧಿಗೆ ವಶಕ್ಕೆ ಕೊಡಬೇಕು ಎಂದು ಪೊಲೀಸರು ಕೇಳಿದ್ದರು. ಆದರೆ 6 ದಿನಗಳ ಅವಧಿಗೆ ಆರೋಪಿಗಳನ್ನು ನ್ಯಾಯಾಲಯವು ಪೊಲೀಸರ ವಶಕ್ಕೆ ನೀಡಿದೆ. ಪ್ರಕರಣದ ಆರೋಪಿಗಳಾದ ಕಣ್ಣೂರು ಮಠದ ಡಾ ಮೃತ್ಯುಂಜಯ ಸ್ವಾಮೀಜಿ, ನಿವೃತ್ತ ಶಿಕ್ಷಕ ಮತ್ತು ವಕೀಲ ಮಹದೇವಯ್ಯ, ಹನಿಟ್ರ್ಯಾಪ್ ನಲ್ಲಿ ಕಾಣಿಸಿಕೊಂಡಿದ್ದ ಯುವತಿ ನೀಲಾಂಬಿಕೆ (ಚಂದು) ಅವರನ್ನು ಹೆಚ್ಚಿನ ವಿಚಾರಣೆಗಾಗಿ ರಾಮನಗರ ಜಿಲ್ಲಾ ಪೊಲೀಸರು ಅಜ್ಞಾತ ಸ್ಥಳಕ್ಕೆ ಕರೆದೊಯ್ದರು.
ನವೆಂಬರ್ 5ರವರೆಗೂ ಆರೋಪಿಗಳು ಪೊಲೀಸರ ವಶದಲ್ಲಿರುತ್ತಾರೆ. ನಂತರ ಅವರನ್ನು ಮತ್ತೊಮ್ಮೆ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದು, ವಿಚಾರಣೆ ಅಗತ್ಯವಿದೆ ಎಂದಾದರೆ ಪೊಲೀಸರು ಅವರನ್ನು ಮತ್ತೆ ವಶಕ್ಕೆ ಕೇಳುವ ಸಾಧ್ಯತೆ ಇದೆ. ಮೃತ ಬಸವಲಿಂಗ ಸ್ವಾಮೀಜಿ ತಮ್ಮ ಡೆತ್ನೋಟ್ ನಲ್ಲಿ ಉಲ್ಲೇಖಿಸಿರುವ ಇತರರಿಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ.
ಬಂಡೆ ಸ್ವಾಮೀಜಿ ತಮಗಿಂತಲೂ ಎತ್ತರಕ್ಕೆ ಬೆಳೆದಿದ್ದಾರೆ ಎಂಬ ಹೊಟ್ಟೆಕಿಚ್ಚು ತಾಳಲಾರದೇ ಕಣ್ಣೂರು ಶ್ರೀಗಳು ಹನಿಟ್ರ್ಯಾಪ್ ಗೆ ಯೋಜಿಸಿದ್ದರು ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಬಸವಲಿಂಗ ಸ್ವಾಮೀಜಿ ಹಾಗೂ ಕಣ್ಣೂರು ಸ್ವಾಮೀಜಿ ಸಹೋದರ ಸಂಬಂಧಿಗಳಾಗಿದ್ದು, ದೊಡ್ಡಪ್ಪ, ಚಿಕ್ಕಪ್ಪ ಮಕ್ಕಳಾಗಿದ್ದರು. ಆದರೆ ಬಂಡೆ ಸ್ವಾಮೀಜಿಗಳು ದಿನದಿಂದ ದಿನಕ್ಕೆ ಪ್ರಖ್ಯಾತಿಯನ್ನು ಪಡೆಯುತ್ತಿದ್ದದ್ದನ್ನು ನೋಡಿ ಕಣ್ಣೂರು ಶ್ರೀಗೆ ಹೊಟ್ಟೆಕಿಚ್ಚು ತರಿಸಿತ್ತು. ಈ ಹಿನ್ನೆಲೆಯಲ್ಲಿ ಬಸವಲಿಂಗ ಸ್ವಾಮೀಜಿಯನ್ನು ಹನಿಟ್ರ್ಯಾಪ್ ನಲ್ಲಿ ಸಿಕ್ಕಿ ಹಾಕಿಸಬೇಕು ಎಂದು ಯೋಜಿಸಿದರು. ಅದೇ ಸಮಯಕ್ಕೆ ಸ್ಥಳೀಯ ಮುಖಂಡ ಮಹದೇವಯ್ಯನ ಮೂಲಕ ನೀಲಾಂಬಿಕೆ, ಕಣ್ಣೂರು ಶ್ರೀಗಳಿಗೆ ಪರಿಚಯವಾಗಿದ್ದಳು.
ಬಸವಲಿಂಗ ಸ್ವಾಮೀಜಿಗೆ ನೀಲಾಂಬಿಕೆ ಪ್ರತಿನಿತ್ಯ ಮೆಸೇಜ್ ಮಾಡುತ್ತಿದ್ದಳು. ದಿನ ಕಳೆದಂತೆ ಸ್ನೇಹ, ಗೆಳತನ ಹೆಚ್ಚಾಗಿ ವಾಟ್ಸಪ್ ಕಾಲ್ ನಲ್ಲಿ ಸಂಭಾಷಣೆ ಬಳಿಕ ವೀಡಿಯೋ ಕಾಲ್ ನಲ್ಲಿ ಮಾತು ಆರಂಭವಾಗಿದೆ. ನಂತರ ಎಲ್ಲಾ ರೆಕಾರ್ಡ್ ಮಾಡಿ ಬಲೆಗೆ ಸ್ಕೆಚ್ ಹಾಕಲಾಗಿದೆ. ಒಟ್ಟಿನಲ್ಲಿ ನೀಲಾಂಬಿಕೆಯನ್ನು ಬಳಸಿಕೊಂಡೇ ಬಸವಲಿಂಗ ಶ್ರೀಗೆ ಕಣ್ಣೂರು ಶ್ರೀ ಖೆಡ್ಡಾ ತೋಡಿದ್ದಾರೆ ಎನ್ನಲಾಗಿದೆ.










