ರಾಂಚಿ : ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರಿಗೆ ಸಮನ್ಸ್ ನೀಡಿದ್ದು, ನವೆಂಬರ್ 3(ನಾಳೆ) ರಂದು ವಿಚಾರಣೆ ಹಾಜರಾಗುವಂತೆ ತಿಳಿಸಿದೆ.
ಹೇಮಂತ್ ಸೊರೆನ್ ಅವರ ರಾಜಕೀಯ ಪ್ರತಿನಿಧಿ ಪಂಕಜ್ ಮಿಶ್ರಾ, ರಾಜಕೀಯ ಪ್ರಭಾವ ಬಳಸಿಕೊಂಡು ಅಕ್ರಮ ಗಣಿಗಾರಿಕೆ ಮೇಲೆ ಸಾಕಷ್ಟು ನಿಯಂತ್ರಣ ಹೊಂದಿದ್ದಾರೆ. ತನ್ನ ಸಹಚರರ ಮೂಲಕ ಸಾಹೇಬ್ ಗಂಜ್ ಮತ್ತು ಜಾರ್ಖಂಡ್ ನ ಪಕ್ಕದ ಪ್ರದೇಶಗಳಲ್ಲಿ ವ್ಯಾಪಾರ ಮತ್ತು ಒಳನಾಡಿನ ದೋಣಿ ಸೇವೆಗಳ ಮೇಲೆ ಹಿಡಿತ ಸಾಧಿಸಿದ್ದಾರೆಂಬ ಆರೋಪ ಕೇಳಿಬಂದಿತ್ತು.
ಜುಲೈನಲ್ಲಿ ರಾಜ್ಯವ್ಯಾಪಿ 18 ಸ್ಥಳಗಳಲ್ಲಿ ದಾಳಿಗಳನ್ನು ನಡೆಸಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ಪಂಕಜ್ ಮಿಶ್ರಾನ ಬ್ಯಾಂಕ್ ಖಾತೆಗಳಿಂದ ರೂ. 11.88 ಕೋಟಿ ಮುಟ್ಟುಗೋಲು ಹಾಕಿಕೊಂಡಿತ್ತು. ಮಿಶ್ರಾ ಮನೆಯಲ್ಲಿ ದಾಖಲೆ ಇಲ್ಲದ 5.34 ಕೋಟಿ ರೂ ಕೂಡ ಪತ್ತೆಯಾಗಿತ್ತು. ಜುಲೈ 19ರಂದು ಪಂಕಜ್ ಮಿಶ್ರಾ, ಹಾಗೂ ಆಗಸ್ಟ್ 4ರಂದು ಅವರ ಸಹಚರರಾದ ಬಚ್ಚು ಯಾದವ್ ಮತ್ತು ಪ್ರೇಮ್ ಪ್ರಕಾಶ್ ಅವರನ್ನು ಬಂಧಿಸಲಾಗಿದೆ. ಇಲ್ಲಿಯವರೆಗೆ ಬಂಧಿತರಾಗಿರುವ ಎಲ್ಲಾ ಆರೋಪಿಗಳು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ.
ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಯಿಂದ ಸೃಷ್ಟಿಯಾದ ಕೋಟ್ಯಂತರ ರೂಪಾಯಿ ಮೌಲ್ಯದ ಅಪರಾಧ ಪ್ರಕ್ರಿಯೆಗಳ ತನಿಖೆ ನಡೆಸುತ್ತಿರುವ ಇಡಿ, ಈವರೆಗೂ ರೂ. 37 ಲಕ್ಷ ಮುಟ್ಟುಗೋಲು ಹಾಕಿದೆ. ಪಂಕಜ್ ಮಿಶ್ರಾ ಅಕ್ರಮವಾಗಿ ಭಾರಿ ಸಂಪತನ್ನು ವಶಪಡಿಸಿಕೊಂಡಿದ್ದು, ಈವರೆಗೂ ರೂ. 42 ಕೋಟಿ ಲೆಕ್ಕ ಸಿಕ್ಕಿದೆ ಎಂದು ಇಡಿ ತಿಳಿಸಿದೆ.










