ತುಮಕೂರು : ಹಿಂದೂ ಪದ ಅಶ್ಲೀಲ ಎಂಬ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿಕೆ ವಿರುದ್ಧ ಗೃಹ ಸಚಿವ ಆರಗ ಜ್ಞಾನೇಂದ್ರ ಕಿಡಿಕಾರಿದ್ದಾರೆ. ಹಿಂದೂ ಪದ ಅಶ್ಲೀಲವಲ್ಲ, ಕಾಂಗ್ರೆಸ್ಸೇ ಅಶ್ಲೀಲ. ಇಷ್ಟು ದಿನ ಕಾಂಗ್ರೆಸ್ಸಿಗರು ಹಿಂದೂಗಳನ್ನ ಅವಮಾನ ಮಾಡುತ್ತಾ ಅಲ್ಪಸಂಖ್ಯಾತರ ಮತ ಪಡೆದುಕೊಂಡು ಅಧಿಕಾರದ ಕುರ್ಚಿ ಮೇಲೆ ಕುಳಿತಿದ್ರು ಎಂದರು.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಈಗ ಇಡೀ ರಾಜ್ಯ ಮತ್ತು ದೇಶದ ಜನಕ್ಕೆ ಕಾಂಗ್ರೆಸ್ಸೇ ಒಂದು ಅಶ್ಲೀಲ ಅಂತ ಗೊತ್ತಾಗಿದೆ. ಹಾಗಾಗಿ ಜನ ಕಾಂಗ್ರೆಸ್ ಪಕ್ಷವನ್ನ ತಿರಸ್ಕರಿಸಿದ್ದಾರೆ. ಈಗಾಗಲೇ ಹಿಂದೂಗಳಿಗೆ ಅವಮಾನ ಮಾಡಿದ್ದಕ್ಕೆ ಬೆಲೆ ತೆತ್ತಿದ್ದಾರೆ. ಮುಂದೆಯೂ ಬೆಲೆ ತೆರುತ್ತಾರೆ. ವೋಟ್ ಬ್ಯಾಂಕ್ ಗಾಗಿ ಕಾಂಗ್ರೆಸ್ ಈ ರೀತಿಯ ವಿವಾದಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗೆ ತಾಕತ್ ಇದ್ರೆ ಇವತ್ತು ಸತೀಶ್ ಜಾರಕಿಹೊಳಿಯನ್ನ ಪಕ್ಷದಿಂದ ಹೊರಗೆ ಹಾಕಲಿ. ಮಗು ಚಿವುಟೊದು, ತೊಟ್ಟಿಲು ತೂಗೋದು ಎರಡು ಕೆಲಸವನ್ನ ಡಿಕೆಶಿ ಮಾಡಬಾರದು. ಈ ಹಿಂದೆ ಪ್ರವಾದಿ ಬಗ್ಗೆ ಅವಹೆಳನಕಾರಿ ಹೇಳಿಕೆ ನೀಡಿದ್ದರಿಂದಾಗಿ ನೂಪುರ್ ಶರ್ಮಾರನ್ನ ಬಿಜೆಪಿ ಪಕ್ಷದಿಂದ ಅಮಾನತು ಮಾಡಿತು. ಅದೇ ರೀತಿ ಸತೀಶ್ ಜಾರಕಿಹೊಳಿ ಮೇಲೆ ಕ್ರಮ ಕೈಗೊಳ್ಳುವ ಧೈರ್ಯ ಕಾಂಗ್ರೆಸ್ ತೊರಲಿ ಎಂದು ಸವಾಲು ಹಾಕಿದ್ದಾರೆ.










