ಡಿಸೆಂಬರ್ 1ರಿಂದ ಹೆಜಮಾಡಿ ಟೋಲ್ ದರ ದುಬಾರಿ…

64
firstsuddi

ಮಂಗಳೂರು : ಡಿಸೆಂಬರ್ 1ರಿಂದ ಅನ್ವಯವಾಗುವಂತೆ ಸುರತ್ಕಲ್ ಎನ್ ಐಟಿಕೆ ಬಳಿಯ ಸುಂಕ ಸಂಗ್ರಹ ಕೇಂದ್ರವು ಹೆಜಮಾಡಿ ಟೋಲ್ ಗೇಟ್ ನೊಂದಿಗೆ ವಿಲೀನಗೊಳ್ಳಲಿದೆ. ಇದರ ಪರಿಣಾಮವಾಗಿ ಹೆಜಮಾಡಿ ಟೋಲ್ ಗೇಟ್ ನಲ್ಲಿ ಹೆಚ್ಚುವರಿ ದರ ವಸೂಲಿಯಾಗಲಿದೆ.

ಸುರತ್ಕಲ್ ಎನ್ ಐಟಿಕೆ ಟೋಲ್ ಗೇಟ್ ಅನ್ನು ಹೆಜಮಾಡಿ ಟೋಲ್ ಜತೆ ವಿಲೀನಗೊಳಿಸಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದೇಶಿಸಿದೆ. ಈ ಸಂಬಂಧ ಉಡುಪಿ ಜಿಲ್ಲಾಡಳಿತಕ್ಕೆ ಪ್ರಾಧಿಕಾರ ಪತ್ರ ಬರೆದಿದೆ. ಡಿ. 1ರಿಂದ ಅನ್ವಯವಾಗುವಂತೆ ಸುರತ್ಕಲ್ ಟೋಲ್ ವಿಲೀನಗೊಳ್ಳಲಿದ್ದು, ಇದರಿಂದ ಹೆಜಮಾಡಿಯಲ್ಲಿ ಟೋಲ್ ದರ ದುಬಾರಿಯಾಗಲಿದೆ ಎಂದು ತಿಳಿಸಿದೆ.

ಈ ಬಗ್ಗೆ ಮುಂದೆ ಯಾವುದೇ ರೀತಿಯ ಕಾನೂನು ಸುವ್ಯವಸ್ಥೆ ತೊಡಕು ಉಂಟಾಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಹೆಜಮಾಡಿಯಲ್ಲಿ ವಿಲೀನದ ಬಳಿಕ ಏರಿಕೆಯಾದ ಸುಂಕದ ಬಳಿಕ ಯಾವುದೇ ಸಮಸ್ಯೆಯಾಗಿ ಟೋಲ್ ಸಂಗ್ರಹದಲ್ಲಿ ವ್ಯತ್ಯಯ ಉಂಟಾದರೆ ಎನ್ ಎಚ್ ಎಐ ಜತೆಗಿನ ರಾಜ್ಯ ಸಹಕಾರ ಒಪ್ಪಂದದಂತೆ ನಷ್ಟವನ್ನು ಸರ್ಕಾರವೇ ಭರಿಸಬೇಕು.

ಈ ಕುರಿತಂತೆ ಉಡುಪಿ ಜಿಲ್ಲಾಡಳಿತದ ಕಡೆಯಿಂದ ಯಾವುದೇ ರೀತಿಯ ಸಹಾಯ, ನೆರವನ್ನು ಪೊಲೀಸ್ ಭದ್ರತೆಯನ್ನು ಕಲ್ಪಿಸಬೇಕು, ಇದು ಡಿ. 1ರಿಂದಲೇ ಚಾಲ್ತಿಗೆ ಬರಲಿದೆ ಎಂದು ಉಡುಪಿ ಜಿಲ್ಲಾಡಳಿತಕ್ಕೆ ಎನ್‌ಎಚ್ಎಐ ಡಿಜಿಎಂ ಮತ್ತು ಯೋಜನ ನಿರ್ದೇಶಕ ಎಚ್.ಎಸ್.ಲಿಂಗೇಗೌಡ ಬರೆದಿರುವ ಪತ್ರದಲ್ಲಿ ತಿಳಿಸಲಾಗಿದೆ.