ಮೈಸೂರು : ಚಿರತೆ ದಾಳಿಯಿಂದ ಮೃತಪಟ್ಟ ಯುವತಿ ಕುಟುಂಬಕ್ಕೆ 7.5 ಲಕ್ಷ ರೂ. ಪರಿಹಾರ ಘೋಷಣೆ ಮಾಡಲಾಗಿದೆ.
ಕಳೆದ ಮಧ್ಯರಾತ್ರಿ 12ರ ತನಕ ನರಸೀಪುರ ಸಾರ್ವಜನಿಕ ಆಸ್ಪತ್ರೆ ಮುಂಭಾಗ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಈ ಮಾಹಿತಿ ಪಡೆದು ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಮೈಸೂರು ವ್ರತ್ತ ಅರಣ್ಯಾಧಿಕಾರಿ ಮಾಲತಿ ಪ್ರಿಯಾ, ಮೃತ ಯುವತಿ ಕುಟುಂಬಕ್ಕೆ 7.5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದರು. ಕುಟುಂಬದ ಒಬ್ಬರಿಗೆ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಕೊಡಿಸುವ ಭರವಸೆ ನೀಡಿದ್ದಾರೆ.
ತಾಲೂಕಿನಲ್ಲಿ ಚಿರತೆ ಹಾವಳಿ ಇರುವ ಹಿನ್ನೆಲೆ 15 ತಂಡಗಳನ್ನು ರಚನೆ ಮಾಡಿ ಬೇರೆಬೇರೆ ಕಡೆಗಳಲ್ಲಿ ಕಾರ್ಯಾಚರಣೆಗೆ ಇಳಿಸುತ್ತೇವೆ. 7 ದಿನಗಳ ಒಳಗೆ ಕಂಡಲ್ಲಿ ಗುಂಡು ಹಾರಿಸಿ ಚಿರತೆಯನ್ನು ಸೆರೆ ಹಿಡಿಯುವ ಕಾರ್ಯ ನಾವು ಮಾಡುತ್ತೇವೆ ಎಂದರು.
ಏನಿದು ಪ್ರಕರಣ?
ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲೂಕಿನ ಎಸ್ ಕೆಬ್ಬೆಹುಂಡಿ ಗ್ರಾಮದ ಮೇಘನಾ ಎಂಬ ಯುವತಿ ಚಿರತೆ ದಾಳಿಗೆ ಬಲಿಯಾಗಿದ್ದಾಳೆ. ಮನೆ ಮುಂದೆ ಕುಳಿತಿದ್ದಾಗ ಗುರುವಾರ ಸಂಜೆ ಚಿರತೆ ದಾಳಿ ಮಾಡಿತ್ತು. ತೀವ್ರವಾಗಿ ಗಾಯಗೊಂಡಿದ್ದ ಮೇಘನಾಳನ್ನ ಟಿ.ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಕೊನೆಯುಸಿರೆಳೆದಿದ್ದಳು.
ಟಿ.ನರಸೀಪುರ ತಾಲೂಕಿನಲ್ಲೇ ಚಿರತೆ ದಾಳಿಗೆ ಎರಡನೇ ಬಲಿಯಾಗಿದೆ. ಕಳೆದ ತಿಂಗಳಷ್ಟೇ ಟಿ.ನರಸಿಪುರ ತಾಲೂಕಿನಲ್ಲೇ ಚಿರತೆ ಓರ್ವ ಯುವಕನ ಮೇಲೆ ದಾಳಿ ಮಾಡಿ ಕೊಂದು ಹಾಕಿತ್ತು.










