ಗೂಗಲ್ ಸಿಇಒ ಸುಂದರ್ ಪಿಚೈಗೆ ಪದ್ಮಭೂಷಣ ಪ್ರಶಸ್ತಿ ಹಸ್ತಾಂತರ – ಭಾರತ ನನ್ನ ಒಂದು ಭಾಗ ಎಂದ ಪಿಚೈ.

64
firstsuddi

ವಾಷಿಂಗ್ಟನ್ : ಟೆಕ್ ದೈತ್ಯ ಆಲ್ಫಾಬೆಟ್, ಗೂಗಲ್ ಸಿಇಒ ಸುಂದರ್ ಪಿಚೈ ಅವರಿಗೆ ಭಾರತದ ಅಮೆರಿಕ ರಾಯಭಾರಿ ಪದ್ಮಭೂಷಣ ಪ್ರಶಸ್ತಿಯನ್ನು ಹಸ್ತಾಂತರಿಸಿದ್ದಾರೆ.

ಅಮೆರಿಕ-ಭಾರತೀಯ ರಾಯಭಾರಿ ತರಂಜಿತ್ ಸಿಂಗ್ ಸಂಧು ಅವರು ನಿನ್ನೆ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಪಿಚೈ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಪ್ರಶಸ್ತಿ ಹಸ್ತಾಂತರಿಸಿದರು. ಗೂಗಲ್ ಸಿಇಒ ಸುಂದರ್ ಪಿಚೈ ಅವರಿಗೆ 73ನೇ ಗಣರಾಜ್ಯೋತ್ಸದಲ್ಲಿ(2022) ವ್ಯಾಪಾರ ಮತ್ತು ಕೈಗಾರಿಕೆ ವಿಭಾಗದಲ್ಲಿನ ಅವರ ಸಾಧನೆಯನ್ನು ಗುರುತಿಸಿ ದೇಶದ ಮೂರನೇ ಅತ್ಯುನ್ನತ ನಾಗರಿಕ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಗಿತ್ತು.

ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಪಿಚೈ, ಈ ಅಪಾರ ಗೌರವಕ್ಕಾಗಿ ನಾನು ಭಾರತದ ಜನರಿಗೆ ಕೃತಜ್ಞನಾಗಿದ್ದೇನೆ. ನನ್ನನ್ನು ರೂಪಿಸಿದ ದೇಶದಿಂದಲೇ ಈ ರೀತಿ ಗೌರವಿಸಲ್ಪಟ್ಟಿರುವುದು ನಂಬಲು ಸಾಧ್ಯವೇ ಆಗುತ್ತಿಲ್ಲ. ಭಾರತ ದೇಶ ಎಂದಿಗೂ ನನ್ನ ಭಾಗವಾಗಿರುತ್ತದೆ. ನಾನು ಎಲ್ಲಿಗೇ ಹೋದರೂ ಭಾರತವನ್ನು ನನ್ನೊಂದಿಗೆ ಕೊಂಡೊಯ್ಯುತ್ತೇನೆ ಎಂದು ಕೊಂಡಾಡಿದರು.