ಕಾಡಾನೆ ದಾಳಿ – ಅದೃಷ್ಟವಶಾತ್ ಪ್ರಾಣಾಪಾಯದಿಂದ ದಂಪತಿ ಪಾರು…

105
firstsuddi

ಚಿಕ್ಕಮಗಳೂರು : ನಿನ್ನೆ ಜಿಲ್ಲೆಯ ತರೀಕೆರೆ ತಾಲೂಕಿನ ರಾಗಿಬಸವನಹಳ್ಳಿಯಲ್ಲಿ ಹೊಲದಲ್ಲಿ ರಾಗಿ ಕಾಯುತ್ತಾ ಮಲಗಿದ್ದ 65 ವರ್ಷದ ಈರಣ್ಣ ಎಂಬವರ ಮೇಲೆ ದಾಳಿ ಮಾಡಿದ ಕಾಡಾನೆ ಅವರನ್ನ ಕೊಂದಿತ್ತು. ಈಗ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪ ರಸ್ತೆಬದಿ ಆಶ್ರಯ ಪಡೆದಿದ್ದವರ ಮೇಲೂ ಕಾಡಾನೆ ದಾಳಿ ಮಾಡಿದೆ. ಆದರೆ ಅದೃಷ್ಟವಶಾತ್ ದಂಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಹಾಸನ ಜಿಲ್ಲೆ ಬೇಲೂರು ತಾಲೂಕಿನ ಹಗರೆ ಮೂಲದ ನಾಗವಲ್ಲಿ ಹಾಗೂ ಗಂಡುಗುಸೆ ಎಂಬ ದಂಪತಿ ಕೂಲಿ ಕೆಲಸಕ್ಕೆಂದು ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮಕ್ಕೆ ಬಂದಿದ್ದರು. ಬಣಕಲ್ ಗ್ರಾಮದ ಪಶು ಆಸ್ಪತ್ರೆ ಬಳಿ ಟೆಂಟ್ ಹಾಕಿಕೊಂಡು ಮಲಗಿದ್ದಾಗ ಇಂದು ಬೆಳಗ್ಗೆ ಕಾಡಾನೆ ದಾಳಿ ಮಾಡಿದೆ. ಅದೃಷ್ಟವಶಾತ್ ದಂಪತಿ ಹಾಗೂ ಸಾವಿನಿಂದ ಪಾರಾಗಿದ್ದಾರೆ.

ನಾಗವಲ್ಲಿ ಹಾಗೂ ಗಂಡುಗುಸೆ ದಂಪತಿಗೆ ತೀವ್ರ ಗಾಯವಾಗಿದ್ದು, ಮೂಡಿಗೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಈಗಾಗಲೇ ಕಳೆದ ಆರು ತಿಂಗಳಲ್ಲಿ ಮೂಡಿಗೆರೆಯಲ್ಲಿ ಮೂವರು ಕಾಡಾನೆ ದಾಳಿಗೆ ಪ್ರಾಣ ಕಳೆದುಕೊಂಡಿದ್ದಾರೆ. ಜನ ಕಾಡಾನೆ ದಾಳಿಯಿಂದ ಕಂಗೆಟ್ಟು ಶಾಸಕರ ಮೇಲೂ ಹಲ್ಲೆ ಮಾಡಿದ್ದರು. ಬಳಿಕ ಅರಣ್ಯ ಇಲಾಖೆ ಮೂರು ಕಾಡಾನೆಗಳನ್ನ ಸೆರೆ ಹಿಡಿದಿದ್ದರು.

ಆದರೆ ನರಹಂತಕ ಒಂಟಿ ಸಲಗ ಮೂಡಿಗೆರೆ ಭೈರನನ್ನ ಸೆರೆ ಹಿಡಿದಿಲ್ಲ ಎಂದು ಸ್ಥಳಿಯರು ಆರೋಪಿಸಿದ್ದರು. ಇಂದು ಬೆಳಗ್ಗೆ ಬಣಕಲ್ ಗ್ರಾಮಕ್ಕೆ ಬಂದಿರುವ ಒಂಟಿ ಸಲಗ ಕೂಡ ಅದೇ ಭೈರ ಎಂಬ ಮಾತುಗಳು ಕೇಳಿ ಬಂದಿದೆ. ಮೇಲಿಂದ ಮೇಲೆ ಕಾಡಾನೆಗಳ ಹಾವಳಿ ಹೆಚ್ಚುತ್ತಿದ್ದರೂ ಆನೆ ಹಾವಳಿ ಬಗ್ಗೆ ಸೂಕ್ತ ಕ್ರಮಕೈಗೊಳ್ಳದ ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.