ಬಡತನವೆಂಬ ಶತ್ರುವಿನ ವಿರುದ್ಧ ಹೋರಾಡಲು ಶಿಕ್ಷಣ ಪ್ರಮುಖ ಅಸ್ತ್ರ : ಎಸ್.ಆರ್.ಮಂಜುನಾಥ್

69
firstsuddi

ಚಿಕ್ಕಮಗಳೂರು : ಮಕ್ಕಳು ವಿದ್ಯಾರ್ಥಿ ದೆಸೆಯಲ್ಲಿ ಓದಿಗೆ ಮಾತ್ರ ಪ್ರಾಮುಖ್ಯತೆ ನೀಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಆರ್.ಮಂಜುನಾಥ್ ಸಲಹೆ ನೀಡಿದರು.

ನಗರದ ವಾಸವಿ ವಿದ್ಯಾಸಂಸ್ಥೆಯಲ್ಲಿ ಇಂದು ನಡೆದ ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಡತನವೆಂಬ ಶತ್ರುವಿನ ವಿರುದ್ಧ ಹೋರಾಡಲು ಶಿಕ್ಷಣ ಪ್ರಮುಖವಾದ ಅಸ್ತ್ರ, ವಿದ್ಯಾವಂತರನ್ನು ಸಮಾಜ ಗುರುತಿಸಿ ಗೌರವಿಸಿ ಸೂಕ್ತ ಸ್ಥಾನ ಮಾನ ನೀಡುತ್ತದೆ ಎಂದ ಅವರು ವಿದ್ಯಾರ್ಥಿಗಳು ಇದನ್ನು ಅರಿತು ಆಕರ್ಷಣೆಗಳಿಗೆ ಬಲಿಯಾಗದೇ ಶ್ರದ್ಧೆ ಮತ್ತು ಪರಿಶ್ರಮದಿಂದ ವಿದ್ಯಾರ್ಜನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.

ವಾಸವಿ ವಿದ್ಯಾ ಸಂಸ್ಥೆಯ ಉಪಾಧ್ಯಕ್ಷ ಜಿ.ಎ.ದಿನೇಶ್ ಗುಪ್ತಾ ಮಾತನಾಡಿ ಮಕ್ಕಳು ಶಿಕ್ಷಣವಂತರಾಗುವುದರ ಜೊತೆಗೆ ದೇಶಪ್ರೇಮಿಗಳು ಮತ್ತು ರಾಷ್ಟ್ರಭಕ್ತರಾಗಿಯೂ ರೂಪುಗೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಪಿ.ಎಸ್.ವೆಂಕಟೇಶ್ ವಿದ್ಯಾರ್ಥಿಗಳು ಶ್ರದ್ಧೆ ಮತ್ತು ಶ್ರಮದಿಂದ ವಿದ್ಯಾರ್ಜನೆ ಮಾಡುವ ಮೂಲಕ ಪೋಷಕರು ಮತ್ತು ವಿದ್ಯಾಸಂಸ್ಥೆಗೆ ಕೀರ್ತಿ ತರಬೇಕು ಎಂದು ಮನವಿ ಮಾಡಿದರು.

ವಾರ್ಷಿಕೋತ್ಸವದ ಅಂಗವಾಗಿ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು.

ಪ್ರಾಂಶುಪಾಲ ಬಿ.ಆರ್.ಕುಮಾರ್ ವಾರ್ಷಿಕ ವರದಿಯನ್ನು ಮಂಡಿಸಿದರು, ವಾಸವಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಜಯಂತಿ ಶೇಖರ್, ಜಂಟಿ ಕಾರ್ಯದರ್ಶಿ ಎಂ.ಎ.ವಿನಯ್ ಕುಮಾರ್, ಮಾಜಿ ಅಧ್ಯಕ್ಷ ಎಂ.ಆರ್.ರಾಜಶೇಖರ್ ಉಪಸ್ಥಿತರಿದ್ದರು.