ಬೆಂಗಳೂರು : ಹಾಡಹಗಲೇ ಕಾಲೇಜಿನಲ್ಲಿ ವಿದ್ಯಾರ್ಥಿಯೊಬ್ಬ ಯುವತಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿ ಬಳಿಕ ತಾನೂ ಚಾಕು ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಗರದ ರಾಜಾನುಕುಂಟೆಯ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ನಡೆದಿದೆ.
ಪ್ರೆಸಿಡೆನ್ಸಿ ಕಾಲೇಜಿನ ಲಯಸ್ಮಿತಾ (19) ಮೃತ ವಿದ್ಯಾರ್ಥಿನಿ. ನೃಪತುಂಗ ಕಾಲೇಜಿನ ವಿದ್ಯಾರ್ಥಿ ಪವನ್ ಕಲ್ಯಾಣ್ ಕೊಲೆ ಆರೋಪಿ. ಇಬ್ಬರೂ ವಿದ್ಯಾರ್ಥಿಗಳು ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಕಾಶಿಪುರ ನಿವಾಸಿಗಳು. ಲಯಸ್ಮಿತಾ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಟೆಕ್ ವಿದ್ಯಾರ್ಥಿನಿಯಾಗಿದ್ದರೆ, ಪವನ್ ಕಲ್ಯಾಣ್ ನೃಪತುಂಗ ಯೂನಿವರ್ಸಿಟಿಯ ಮೊದಲ ವರ್ಷದ ಬಿಸಿಎ ವಿದ್ಯಾರ್ಥಿಯಾಗಿದ್ದಾನೆ.
ಯುವತಿಗೆ ಚಾಕು ಇರಿದ ಪವನ್ ಕಲ್ಯಾಣ್ ಕೂಡ ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ರಾಜಾನುಕುಂಟೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸದ್ಯ ಲಯಸ್ಮಿತಾ ಮೃತದೇಹವನ್ನು ರಕ್ಷಾ ಆಸ್ಪತ್ರೆಯಿಂದ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಘಟನೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ ಪ್ರೀತಿ ವಿಚಾರಕ್ಕೆ ಘಟನೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










