ಡೆಹ್ರಾಡೂನ್ : ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಭಾರತದ ಕ್ರಿಕೆಟಿಗ ರಿಷಭ್ ಪಂತ್ ರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈಗೆ ಏರ್ಲಿಫ್ಟ್ ಮಾಡಲಾಗಿದೆ.
ಡಿ.30 ರಂದು ದೆಹಲಿಯಿಂದ ಉತ್ತರಾಖಂಡ್ ಗೆ ತೆರಳುತ್ತಿದ್ದ ವೇಳೆ ಹಮ್ಮಲ್ ಪುರ ಝಾರ್ ನ ರೂರ್ಕಿಯ ನರ್ಸನ್ ಗಡಿಯಲ್ಲಿ ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದು, ಕಾರಿನಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಕೂಡಲೇ ಕಾರಿನಲ್ಲಿದ್ದ ಪಂತ್ ಗಾಜನ್ನು ಒಡೆದುಕೊಂಡು ಹೊರಬಂದಿದ್ದರು. ಕೂಡಲೇ ಪಂತ್ ರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಗಂಭೀರ ಗಾಯಗೊಂಡಿದ್ದ ಪಂತ್ ಡೆಹ್ರಾಡೂನ್ ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಅಪಘಾತದ ಬಳಿಕ ರಿಷಭ್ ಅವರ ಹಣೆಗೆ ಎರಡು ಸ್ಟಿಚ್ ಹಾಕಲಾಗಿತ್ತು. ಅವರ ಬಲ ಮೊಣಕಾಲು, ಬಲ ಮಣಿಕಟ್ಟು, ಪಾದ, ಪಾದದ ಬೆರಳು, ಬೆನ್ನಿಗೆ ಗಾಯವಾಗಿತ್ತು. ಇದೀಗ ಕಾಲಿನ ಗಾಯದ ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕಿರುವ ಕಾರಣ ಪಂತ್ರನ್ನು ಮುಂಬೈಗೆ ಏರ್ಲಿಫ್ಟ್ ಮಾಡಿಸಿ ಚಿಕಿತ್ಸೆ ಕೊಡಿಸಲು ಬಿಸಿಸಿಐ ನಿರ್ಧರಿಸಿದೆ.
ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಸಂಸ್ಥೆಯಲ್ಲಿ ಪಂತ್ ಗೆ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತದೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.










