ಡೆಹ್ರಾಡೂನ್ : ಉತ್ತರಾಖಂಡದ ಬೆಟ್ಟ ಪ್ರದೇಶಗಳಲ್ಲಿ ಭೂಮಿ ಮುಳುಗಡೆ ಭೀತಿ ಕಾಡುತ್ತಿದೆ. ಜೋಶಿಮಠದಲ್ಲಿ ಕೆಲದಿನಗಳಿಂದ ಅಲ್ಲಲ್ಲಿ ಭೂಮಿಯಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿದೆ. ಈ ನಡುವೆ ಕರ್ಣಪ್ರಯಾಗದಲ್ಲೂ ಇದೇ ರೀತಿಯ ಪ್ರಕರಣಗಳು ವರದಿಯಾಗಿದ್ದು ಜನ ಭಯಭೀತರಾಗಿದ್ದಾರೆ. ಕರ್ಣಪ್ರಯಾಗದಲ್ಲಿ 50ಕ್ಕೂ ಹೆಚ್ಚು ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಈಗಾಗಲೇ ಕುಸಿತದ ಭೀತಿಯಲ್ಲಿರುವ 600ಕ್ಕೂ ಹೆಚ್ಚು ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಗರ್ವಾಲ್ ಕಮಿಷನರ್ ಸುಶೀಲ್ ಕುಮಾರ್ ಮತ್ತು ವಿಪತ್ತು ನಿರ್ವಹಣಾ ಕಾರ್ಯದರ್ಶಿ ರಂಜಿತ್ ಕುಮಾರ್ ಸಿನ್ಹಾ ಸೇರಿದಂತೆ ತಜ್ಞ ಭೂವಿಜ್ಞಾನಿಗಳ ತಂಡವು ಜೋಶಿಮಠದಲ್ಲಿ ಭೂ ಮುಳುಗಡೆ ಪೀಡಿತ ಪ್ರದೇಶಗಳ ಆಳವಾದ ಸಮೀಕ್ಷೆಯನ್ನು ನಡೆಸಿದೆ. ಜೋಶಿಮಠದಲ್ಲಿ ಎನ್ಡಿಆರ್ಎಫ್ ತಂಡವನ್ನು ನಿಯೋಜಿಸಲು ಸೂಚನೆ ನೀಡಲಾಗಿದೆ.
ಈ ವೇಳೆ ಜೋಶಿಮಠದ ಮನೋಹರ್ ಬಾಗ್, ಸಿಂಗ್ಧರ್, ಜೆಪಿ, ಮಾರ್ವಾರಿ, ಸುನೀಲ್ ಗಾಂವ್, ವಿಷ್ಣು ಪ್ರಯಾಗ, ರವಿಗ್ರಾಮ, ಗಾಂಧಿನಗರ ಮೊದಲಾದ ಪ್ರದೇಶಗಳಲ್ಲಿ ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸಲಾಗಿದೆ. ಜೊತೆಗೆ ತಪೋವನಕ್ಕೆ ಭೇಟಿ ನೀಡಿ ಎನ್ ಟಿಪಿಸಿ ಸುರಂಗದ ಒಳಗೆ ಮತ್ತು ಹೊರಗೆ ನಡೆಯುತ್ತಿರುವ ಕಾಮಗಾರಿಗಳ ಪರಿಶೀಲನೆ ನಡೆಸಲಾಗಿದೆ.
ಸುಮಾರು 50,000 ಜನಸಂಖ್ಯೆಯೊಂದಿಗೆ, ಕರ್ಣಪ್ರಯಾಗವು ಸಮುದ್ರ ಮಟ್ಟದಿಂದ 860 ಮೀಟರ್ ಎತ್ತರದಲ್ಲಿದೆ. ಜೋಶಿಮಠವು 1,890 ಮೀಟರ್ ಎತ್ತರದಲ್ಲಿದೆ. ಕರ್ಣಪ್ರಯಾಗವು ಜೋಶಿಮಠದಿಂದ 80 ಕಿ.ಮೀ ದೂರದಲ್ಲಿದೆ ಆದರೂ ಈ ಎರಡೂ ಪ್ರದೇಶಗಳಲ್ಲಿ ಇದೀಗ ಭೂಮಿ ಬಿರುಕು ಬಿಡುತ್ತಿರುವುದು ಕಂಡುಬರುತ್ತಿದೆ. ಬಹುಗುಣನಗರ, ಸಿಎಂಪಿ ಬ್ಯಾಂಡ್ ಮತ್ತು ಕರ್ಣಪ್ರಯಾಗದ ಸಬ್ಜಿ ಮಂಡಿಯ ಮೇಲ್ಭಾಗದಲ್ಲಿ ವಾಸಿಸುವ 50ಕ್ಕೂ ಹೆಚ್ಚು ಕುಟುಂಬಗಳು ಆತಂಕದಲ್ಲಿವೆ.
ಜೋಶಿಮಠದಲ್ಲಿ ಭೂ ಕುಸಿತದ ಕುರಿತು ಅಧ್ಯಯನ ನಡೆಸಲು ಕೇಂದ್ರವು ಸಮಿತಿಯನ್ನು ರಚಿಸಿದೆ. ಸಮಿತಿಯು ಪರಿಸರ ಮತ್ತು ಅರಣ್ಯ ಸಚಿವಾಲಯ, ಕೇಂದ್ರ ಜಲ ಆಯೋಗ, ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ಮತ್ತು ಗಂಗಾ ಶುದ್ಧೀಕರಣಕ್ಕಾಗಿ ರಾಷ್ಟ್ರೀಯ ಮಿಷನ್ ಪ್ರತಿನಿಧಿಗಳನ್ನು ಒಳಗೊಂಡಿದ್ದು ಸರ್ವೆ ಕಾರ್ಯ ಆರಂಭಿಸಿದ್ದಾರೆ.










