ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸಬೇಕು : ಪುಟ್ಟಾನಾಯ್ಕ.

54
firstsuddi

ಚಿಕ್ಕಮಗಳೂರು : ವಿದ್ಯಾರ್ಥಿಗಳು ತಮ್ಮ ಭವಿಷ್ಯದ ದೃಷ್ಠಿಯಿಂದ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪುಟ್ಟಾನಾಯ್ಕ ಸಲಹೆ ನೀಡಿದರು.

ತಾಲ್ಲೂಕಿನ ಕಳಸಾಪುರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ವಿವಿಧ ಸಂಘಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗೆ ಅಂಕಗಳನ್ನು ತೆಗೆಯುವುದು ಎಷ್ಟು ಮುಖ್ಯವೋ ಹಾಗೇ ಕ್ರೀಡಾಪಟುವಾಗಿ, ಸಾಂಸ್ಕೃತಿಕವಾಗಿ ಮತ್ತು ಸಾಹಿತ್ಯಿಕವಾಗಿ ಬೆಳೆಯುವುದೂ ಅಷ್ಟೇ ಮುಖ್ಯ ಎಂದರು.

ಶ್ರದ್ದೆ ಮತ್ತು ಪರಿಶ್ರಮದಿಂದ ವಿದ್ಯಾರ್ಜನೆ ಮಾಡಿದರೆ ಉದ್ಯೋಗ ಗಿಟ್ಟಿಸಲು ಅನುಕೂಲವಾಗುತ್ತದೆ, ಕ್ರೀಡೆಗಳಲ್ಲಿ ಭಾಗವಹಿಸಿದರೆ ಮಾನಸಿಕ ಮತ್ತು ದೈಹಿಕವಾಗಿ ಸಧೃಡರಾಗಬಹುದು, ಸಾಂಸ್ಕೃತಿಕವಾಗಿ ಮತ್ತು ಸಾಹಿತ್ಯಿಕವಾಗಿ ಬೆಳೆದರೆ ಆರೋಗ್ಯವಂತ ಸಮಾಜದ ನಿರ್ಮಾಣವಾಗುತ್ತದೆ ಎಂದು ತಿಳಿಸಿದರು.

ಪ್ರಧಾನ ಉಪನ್ಯಾಸ ನೀಡಿದ ಹಾಸನದ ಚಿಂತಕ ಚಿನ್ಮಯಿಪ್ರಸನ್ನಕೃಷ್ಣ ಯುವ ಜನತೆ ವಿದ್ಯೆಯ ಜೊತೆಗೆ ರಾಷ್ಟ್ರೀಯ ಚಿಂತನೆಗಳನ್ನೂ ಮೈಗೂಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಹೆಚ್.ಎಂ.ನಾಗರಾಜರಾವ್ ವಿದ್ಯಾರ್ಥಿಗಳನ್ನು ವಿದ್ಯಾವಂತರನ್ನಾಗಿ ಮಾಡುವುದರ ಜೊತೆಗೆ ಅವರನ್ನು ಸಂಸ್ಕಾರವಂತರನ್ನಾಗಿಯೂ ರೂಪಿಸಲು ಕಾಲೇಜು ಶ್ರಮಿಸುತ್ತಿದೆ ಎಂದು ತಿಳಿಸಿದರು.

ಬೆಂಗಳೂರಿನ ಪ್ರೇರಣಾ ಟ್ರಸ್ಟ್ ವತಿಯಿಂದ ದಿ|| ಕೇಶವ್ ಅವರ ಸ್ಮರಣಾರ್ಥ ವಿದ್ಯಾರ್ಥಿವೇತನ ವಿತರಿಸಲಾಯಿತು, ಉಪನ್ಯಾಸಕ ರಾಜೇಶ್ ವಾರ್ಷಿಕ ವರದಿಯನ್ನು ಮಂಡಿಸಿದರು, ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಸಿಬಿಸಿ ಕಾರ್ಯಾಧ್ಯಕ್ಷ ದಿನೇಶ್, ಸದಸ್ಯರಾದ ನಟರಾಜ್, ಸಿದ್ದೇಗೌಡ, ರುದ್ರೇಶ್, ಕೆಪಿಎಸ್ ಮುಖ್ಯಶಿಕ್ಷಕಿ ಸುಮಾ, ವಿನಾಯಕ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಗಂಗಾಧರ್, ಉಪನ್ಯಾಸಕರಾದ ಶಾಂತಕುಮಾರ್, ಜಿ.ಬಿ.ಸುಕನ್ಯ ಉಪಸ್ಥಿತರಿದ್ದರು.