ಬೆಳಗಾವಿ : ಸಾರಥಿ ನಗರದ ವಸತಿ ನಿವೇಶನದಲ್ಲಿ ಅನಧಿಕೃತವಾಗಿ ಮಸೀದಿ ನಿರ್ಮಾಣ ವಿವಾದಕ್ಕೆ ಸಂಬಂಧಿಸಿದಂತೆ ವಕ್ಫ್ ಕಮಿಟಿ ನಗರದ ಫಾತೀಮಾ ಮಸೀದಿಗೆ ಬೀಗ ಜಡಿದಿದೆ.
ವಸತಿ ನಿವಾಸದಲ್ಲಿ ಫಾತೀಮಾ ಮಸೀದಿಯನ್ನು ಅನಧಿಕೃತವಾಗಿ ನಿರ್ಮಿಸಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಹಿಂದೂಪರ ಸಂಘಟನೆಗಳು, ಬಿಜೆಪಿ ನಾಯಕರು ಸೇರಿ ಡಿಸಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯು ಫಾತಿಮಾ ಮಸೀದಿಯಲ್ಲಿ ಧಾರ್ಮಿಕ ಚಟುವಟಿಕೆ ನಿಲ್ಲಿಸುವಂತೆ ನೋಟಿಸ್ ನೀಡಿತ್ತು.
ಆದರೂ ನೋಟಿಸ್ ಗೆ ಕ್ಯಾರೆ ಎನ್ನದ ಹಿನ್ನೆಲೆಯಲ್ಲಿ ಇದೀಗ ಮಹಾನಗರ ಪಾಲಿಕೆ ಆಯುಕ್ತ ಡಾ. ರುದ್ರೇಶ್ ಘಾಳಿ ಅವರು, ವಕ್ಫ್ ಬೋರ್ಡ್ ಗೆ ಕೂಡಲೇ ಮಸೀದಿಗೆ ಬೀಗ ಹಾಕುವಂತೆ ನೋಟಿಸ್ ನೀಡಿದ್ದಾರೆ. ಮಹಾನಗರದ ಪಾಲಿಕೆ ನೋಟಿಸ್ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ. ಮಸೀದಿ ಮುಂಭಾಗದಲ್ಲಿ ಮುಂಜಾಗ್ರತಾ ಕ್ರಮವಾಗಿ ಒಂದು ಕೆಎಸ್ಆರ್ ಪಿ ತುಕಡಿ ನಿಯೋಜನೆ ಮಾಡಲಾಗಿದೆ.










