ಬೆಂಗಳೂರು : ಕೆಳ ಮನೆಯಲ್ಲಿದ್ದ ವಿವಾಹಿತೆ, ಮೇಲಿನ ಮನೆಯಲ್ಲಿದ್ದ ವಿವಾಹಿತನ ಜೊತೆಗೆ ಪರಾರಿಯಾಗಿರುವ ವಿಚಿತ್ರ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಇದೀಗ ಎರಡೂ ಕಟುಂಬದವರು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಿಸಿದ್ದಾರೆ.
12 ವರ್ಷದ ಹಿಂದೆ ವಿವಾಹವಾಗಿದ್ದ ನವೀದ್ ಮತ್ತು ಝೀನತ್ ದಂಪತಿ ಎರಡನೇ ಮಹಡಿಯಲ್ಲಿ ವಾಸವಾಗಿದ್ದರು. 8 ವರ್ಷದ ಹಿಂದೆ ವಿವಾಹವಾಗಿದ್ದ ಮುಬಾರಕ್ ಮತ್ತು ಶಾಜಿಯಾ ದಂಪತಿ ಕೆಳ ಮಹಡಿಯಲ್ಲಿ ವಾಸವಾಗಿದ್ದರು. ಇಬ್ಬರು ದಂಪತಿಗಳಿಗೂ ಇಬ್ಬರು ಮಕ್ಕಳಿದ್ದಾರೆ. ಈ ಎರಡೂ ಕುಟುಂಬ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಮಾರುತಿ ನಗರ್ ನಲ್ಲಿ ಒಂದೇ ಕಟ್ಟಡದಲ್ಲಿ ವಾಸವಿತ್ತು. ಮುಬಾರಕ್ ಪತ್ನಿ ಶಾಜಿಯಾ ಜೊತೆಗೆ ಝೀನತ್ ಪತಿ ನವೀದ್ ಅನೈತಿಕ ಸಂಬಂಧ ಹೊಂದಿರುವ ಆರೋಪ ಇದೀಗ ಕೇಳಿಬಂದಿದೆ. ಶಾಜಿಯಾ ಮತ್ತು ನವೀದ್ ಇಬ್ಬರೂ ಮನೆಬಿಟ್ಟು ಎಸ್ಕೇಪ್ ಆಗಿದ್ದಾರೆ.
ಕೆಳ ಮಹಡಿಯ ಗಂಡ, ಮೇಲಿನ ಮನೆಯಲ್ಲಿರುವ ಹೆಂಡತಿ ಬೆಂಗಳೂರಿನ ಜ್ಞಾನಭಾರತಿಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನನ್ನ ಹೆಂಡತಿ ಕಾಣ್ತಿಲ್ಲ ಅಂತಾ ಗಂಡ, ನನ್ನ ಗಂಡ ಕಾಣ್ತಿಲ್ಲ ಅಂತ ಹೆಂಡತಿ ಇಬ್ಬರೂ ದೂರು ದಾಖಲಿಸಿದ್ದಾರೆ.
ಡಿಸೆಂಬರ್ 9 ,2022 ರಂದು ಶಾಜಿಯಾ ಮತ್ತು ನವೀದ್ ಇಬ್ಬರು ಮನೆಯಿಂದ ಪರಾರಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ದೂರು ನೀಡಿ ಒಂದು ತಿಂಗಳು ಕಳೆದರೂ ಪೊಲೀಸರು ಕ್ರಮ ಕೈಗೊಂಡಿಲ್ಲವೆಂದು ಝೀನತ್ ಮತ್ತು ಮುಬಾರಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.










