ಹೃದಯಾಘಾತದಿಂದ ಮಂಗಳೂರಿನ ಯೋಧ ನಿಧನ…

47
firstsuddi

ಮಂಗಳೂರು : ಭೋಪಾಲ್ ನಲ್ಲಿ ಸಶಸ್ತ್ರ ಸೀಮಾಬಲ್ ನಲ್ಲಿ ಸೇವಾ ನಿರತರಾಗಿದ್ದ ಮಂಗಳೂರು ಶಕ್ತಿನಗರದ ನಿವಾಸಿ ಹವಾಲ್ದಾರ್ ಮುರಳೀಧರ್ ರೈ ಅವರು ಸೋಮವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕರ್ತವ್ಯದಲ್ಲಿದ್ದಾಗ ಮಲಗಿದ್ದಲ್ಲೇ ಇವರು ಕೊನೆಯುಸಿರೆಳೆದಿದ್ದಾರೆ.

ಮುರಳೀಧರ್ ರೈ ಅವರು 2007ರಲ್ಲಿ ಕಾನ್ ಸ್ಟೆಬಲ್ ಆಗಿ ಸಶಸ್ತ್ರ ಸೀಮಾಬಲ್ ಗೆ ಸೇರಿದ್ದರು. ನಿನ್ನೆ ರಜೆ ಮೇಲೆ ಅವರು ಊರಿಗೆ ಬರಬೇಕಾಗಿತ್ತು. ಆದರೆ ಅದಕ್ಕಿಂತ ಒಂದು ದಿನ ಮೊದಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರು ಪತ್ನಿ ಹಾಗೂ ಏಳು ತಿಂಗಳ ಮಗುವನ್ನು ಅಗಲಿದ್ದಾರೆ.

ನಿನ್ನೆ ಭೋಪಾಲ್ ನಿಂದ ವಿಮಾನದ ಮೂಲಕ ಮುರಳೀಧರ್ ಅವರ ಮೃತದೇಹವನ್ನು ಮಂಗಳೂರು ವಿಮಾನ ನಿಲ್ದಾಣಕ್ಕೆ ತರಲಾಗಿತ್ತು. ವಿಮಾನ ನಿಲ್ದಾಣದಲ್ಲಿ ಡಿಸಿ ರವಿ ಕುಮಾರ್ ಎಂ.ಆರ್., ಜಿ.ಪಂ. ಸಿಇಒ ಡಾ| ಕುಮಾರ್, ಸಹಾಯಕ ಆಯುಕ್ತ ಮದನ್ ಮೋಹನ್ ಮೊದಲಾದವರು ಅಂತಿಮ ನಮನ ಸಲ್ಲಿಸಿದರು. ಬಳಿಕ ಎ.ಜೆ.ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿತ್ತು. ಇಂದು ಶಕ್ತಿನಗರದ ಮನೆಯಲ್ಲಿ ಅಂತಿಮ ದರ್ಶನಕ್ಕೆ ಏರ್ಪಾಡು ಮಾಡಲಾಗಿದೆ.