ಬಿಎಂಟಿಸಿ ಬಸ್‍ಗೆ ಮತ್ತೊಂದು ಬಲಿ – ಮೂವರಿಗೆ ಗಂಭೀರ ಗಾಯ…

56
firstsuddi

ಬೆಂಗಳೂರು: ಬಿಎಂಟಿಸಿ ಬಸ್ ಗೆ ಮತ್ತೊಂದು ಬಲಿಯಾಗಿದೆ. ನಾಗವಾರ-ಯಲಹಂಕ ಮಾರ್ಗದಲ್ಲಿ ಸರಣಿ ಅಪಘಾತವಾಗಿದೆ. ಎರಡು ಕಾರು, ದ್ವಿಚಕ್ರ ವಾಹನಕ್ಕೆ ಬಸ್ ಡಿಕ್ಕಿ ಹೊಡೆದಿದ್ದು ಅಪಘಾತದಲ್ಲಿ ಓರ್ವರು ಮೃತಪಟ್ಟಿದ್ದಾರೆ.

ನಾಗವಾರ ಹಾಗೂ ಯಲಹಂಕ ಮಾರ್ಗವಾಗಿ ಸಂಚರಿಸ್ತಿದ್ದ 290 ಇಡಿ ಬಸ್ ಬೆಳ್ಳಳ್ಳಿ ಕಡೆಯಿಂದ ಹೆಗಡೆನಗರ ಮಾರ್ಗವಾಗಿ ಹೊಗ್ತಿತ್ತು. ಇದೇ ಸಮಯದಲ್ಲಿ ಭಾರತೀಯ ಸಿಟಿ ಜಂಕ್ಷನ್ ಬಳಿ ಟ್ರಾಫಿಕ್ ವಾರ್ಡನ್ ಸೂಚನೆ ಮೇರೆಗೆ ಬೈಕ್ ಗಳು ನಿಂತಿದ್ದವು. ಈ ವೇಳೆ ಹಿಂದೆಯಿಂದ ಅತೀ ವೇಗದಲ್ಲಿ ಬಂದ ಬಿಎಂಟಿಸಿ ಬಸ್, ಚಾಲಕನ ನಿಯಂತ್ರಣ ತಪ್ಪಿ 2 ಕಾರುಗಳಿಗೆ ಡಿಕ್ಕಿ ಹೊಡೆದಿದೆ ನಂತರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ.

ಅಪಘಾತದಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು. ಗಾಯಳುಗಳನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಯೂಬ್ ಖಾನ್ (33) ಮೃತಪಟ್ಟಿದ್ದಾರೆ. ಗಾಯಗೊಂಡ ರಫೀವುಲ್ಲಾ ಖಾನ್, ಮುಸಾದ್ದೀಕ್, ಮುನ್ನಾವರ್ ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಚಿಕ್ಕಜಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚಾಲಕ ಹಾಗೂ ಬಸ್ ನ್ನು ವಶಕ್ಕೆ ಪಡೆದಿದ್ದಾರೆ. ಬ್ರೇಕ್ ಫೇಲ್‌ನಿಂದ ಘಟನೆ ಸಂಭವಿಸಿರುವುದಾಗಿ ಚಾಲಕ ಗೊವೀಂದ್ ರಾಜು ಹೇಳಿಕೆ ನೀಡಿದ್ದಾರೆ.