ಚಿಕ್ಕಮಗಳೂರು : ರಾಜ್ಯ ಬಿಜೆಪಿ ನಪುಂಸಕ ಸರ್ಕಾರ ಎಂಬ ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್‍ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಟಾಂಗ್ ನೀಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅವರಷ್ಟು ಸಾಮರ್ಥ್ಯವಿಲ್ಲ ಎಂದು ನಾವು ಮೊದಲೇ ಒಪ್ಪಿಕೊಂಡಿದ್ದೇವೆ. ನಮ್ಮದು ಮನೆಯೊಳಗಿನ ಸಾಮರ್ಥ್ಯ, ಅವರದ್ದು ಮನೆ-ಊರು ದಾಟಿದ ಸಾಮರ್ಥ್ಯ. ನಮಗೆ ಅಷ್ಟು ಸಾಮರ್ಥ್ಯ ಇಲ್ಲ ಎಂದರು.
ಸಿಎಂ ಆಗಿದ್ದಾಗ ಜೆಡಿಎಸ್ ಭದ್ರಕೋಟೆಯಲ್ಲೇ ನೂರಾರು ಕೋಟಿ ಖರ್ಚು ಮಾಡಿ ಮಗನನ್ನ ಗೆಲ್ಲಿಸಲು ಆಗಲಿಲ್ಲ. ದೇವೇಗೌಡರು ಹಿರಿಯರು, ಅವರ ಬಗ್ಗೆ ಗೌರವಿದೆ. ಇಳಿ ವಯಸ್ಸಿನಲ್ಲಿ ಕಾಂಗ್ರೆಸ್-ಜೆಡಿಎಸ್ ಸೇರಿ ಗೆಲ್ಲಿಸಲು ಆಗಲಿಲ್ಲ. ರಾಜಕೀಯವಾಗಿ ಹೇಳಿದ್ದರೆ, ಬಿಜೆಪಿ 25 ಪ್ಲಸ್ ಮತ್ತು 126 ಸೀಟು ಗೆಲ್ಲುವ ಮೂಲಕ ತನ್ನ ಸಾಮರ್ಥ್ಯ ತೋರಿಸಿದೆ. ನಮ್ಮದು ಸೀಮಿತ ಚೌಕಟ್ಟಿನ ಸಾಮರ್ಥ್ಯ, ಅವರ ಸಾಮರ್ಥ್ಯಕ್ಕೆ ನಾವು ಶರಣು ಶರಣಾರ್ಥಿ ಎಂದು ವ್ಯಂಗ್ಯವಾಡಿದರು.
ಇನ್ನು, ಪ್ರಹ್ಲಾದ್ ಜೋಶಿ ಅವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಿ ಹೇಳಿಕೆಗೆ ಟಾಂಗ್ ನೀಡಿದ ಸಿಟಿ ರವಿ, ಬಿಜೆಪಿಯಲ್ಲಿ ಸಾಮರ್ಥ್ಯಕ್ಕೆ ಅನುಗುಣವಾಗಿ ಸಾಮಾನ್ಯ ಕಾರ್ಯಕರ್ತ ಕೂಡ ಮುಖ್ಯಮಂತ್ರಿಗಳು ಆಗಬಹುದು. ಅದೇ ಪರಿಸ್ಥಿತಿ ಜನತಾದಳದಲ್ಲಿ ಇದೆಯಾ? ಜೆಡಿಎಸ್ ನಲ್ಲಿ ಸಾಮಾನ್ಯ ಕಾರ್ಯಕರ್ತನನ್ನು ದೊಡ್ಡ ಮನುಷ್ಯನನ್ನಾಗಿ ಮಾಡಿ ಕೊಡಲು ಸಾಧ್ಯವಿದ್ಯಾ ಎಂದು ಪ್ರಶ್ನಿಸಿದರು.










