ದೆಹಲಿ ಅಬಕಾರಿ ನೀತಿ ಹಗರಣ- ಕೆಸಿಆರ್ ಪುತ್ರಿಯ ಮಾಜಿ ಆಡಿಟರ್ ಬಂಧಿಸಿದ ಸಿಬಿಐ…

60
firstsuddi

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್ ಮೂಲದ ಚಾರ್ಟರ್ಡ್ ಅಕೌಂಟೆಂಟ್ ಬುಚ್ಚಿ ಬಾಬು ಗೋರಂಟ್ಲಾ ಎಂಬುವರನ್ನು ಸಿಬಿಐ ಬಂಧಿಸಿದೆ. ಬಂಧಿತ ಚಾರ್ಟರ್ಡ್ ಅಕೌಂಟೆಂಟ್ ಬುಚ್ಚಿ ಬಾಬು ಗೋರಂಟ್ಲಾ ತೆಲಂಗಾಣ ಸಿಎಂ ಕೆಸಿಆರ್ ಪುತ್ರಿ ಕೆ ಕವಿತಾ ಅವರಿಗೆ ಆಡಿಟರ್ ಆಗಿ ಕೆಲಸ ಮಾಡಿದ್ದರು.

ಇಂದು ಮಾಜಿ ಆಡಿಟರ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ವರದಿಗಳ ಪ್ರಕಾರ, ಗೋರಂಟ್ಲಾ ಅವರು ದೆಹಲಿಯ ಅಬಕಾರಿ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿ ಭಾಗಿಯಾಗಿದ್ದರು.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರ 2021-22ನೇ ಸಾಲಿನ ಅಬಕಾರಿ ನೀತಿಯನ್ನು ರೂಪಿಸಿತ್ತು. ಈ ವೇಳೆ 468 ಖಾಸಗಿ ಬಾರ್​ಗಳಿಗೆ ಅನುಮತಿ ನೀಡಲಾಗಿತ್ತು. ಆದರೆ ಈ ನೀತಿಯ ಜಾರಿಯ ವೇಳೆ ಹಲವಾರು ಅಕ್ರಮಗಳು ನಡೆದಿವೆ ಎಂದು ವಿಕೆ ಸಕ್ಸೇನಾ ಕಳೆದ ತಿಂಗಳು ಸಿಬಿಐಗೆ ಶಿಫಾರಸು ಮಾಡಿದ್ದರು.

ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪುತ್ರಿ ಹಾಗೂ ಟಿಆರ್‍ಎಸ್ ಎಂಎಲ್‍ಸಿ ಕೆ. ಕವಿತಾ ಅವರ ಹೆಸರು ಪ್ರಕರಣದಲ್ಲಿ ಕೇಳಿಬಂದಿದೆ. ಸಿಬಿಐ ಸಲ್ಲಿಸಿದ ಚಾರ್ಜ್‍ಶೀಟ್ ನಲ್ಲೂ ಕವಿತಾ ಅವರ ಹೆಸರಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸೆಂಬರ್ 12 ರಂದು ಹೈದರಾಬಾದ್ ನಲ್ಲಿ ಸಿಬಿಐ ತಂಡವು ಕೆ ಕವಿತಾ ಅವರನ್ನು ಏಳು ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು.