ನವದೆಹಲಿ : ವಂಚಕ ಸುಕೇಶ್ ಚಂದ್ರಶೇಖರ್ ಇರುವ ಮಂಡೋಲಿ ಜೈಲಿನ ಸೆಲ್ ಮೇಲೆ ಇಂದು ಜೈಲು ಅಧಿಕಾರಿಗಳು ಸೇರಿದಂತೆ ವಿಶೇಷ ಅಧಿಕಾರಿಗಳು ದಾಳಿ ನಡೆಸಿದ್ದು, ಆತನ ಬಳಿ ಇದ್ದ 1.5 ಲಕ್ಷ ಮೌಲ್ಯದ ಚಪ್ಪಲಿ, 80 ಸಾವಿರ ಮೌಲ್ಯದ ಮೂರು ಜೀನ್ಸ್ ಸೇರಿದಂತೆ ಹಲವು ಐಷಾರಾಮಿ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ತಪಾಸಣೆಗಾಗಿ ಅಧಿಕಾರಿಗಳು ಜೈಲಿನಲ್ಲಿನ ಕೊಠಡಿ ಪ್ರವೇಶಿಸುತ್ತಿರುವ ಸಿಸಿಟಿವಿ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಸುಕೇಶ್ ಅಳುವುದನ್ನು ಕಾಣಬಹುದಾಗಿದೆ.
ಇತ್ತ ಸುಕೇಶ್ ಚಂದ್ರಶೇಖರ್ ಕೋಣೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಸೋರಿಕೆ ಮಾಡಿದ ವ್ಯಕ್ತಿಯ ವಿರುದ್ಧ ಜೈಲು ಪ್ರಾಧಿಕಾರವು ವಿಚಾರಣೆ ನಡೆಸಿ ಕ್ರಮ ತೆಗೆದುಕೊಳ್ಳುತ್ತದೆ ಎಂದು ಜೈಲು ಅಧಿಕಾರಿಗಳು ಹೇಳಿದ್ದಾರೆ.
ತಾನು ಕೇಂದ್ರ ಗೃಹ ಮತ್ತು ಕಾನೂನು ಕಾರ್ಯದರ್ಶಿ ಎಂದು ಹೇಳಿಕೊಂಡು ಮಾಜಿ ರೆಲಿಗೇರ್ ಪ್ರವರ್ತಕ ಮಲ್ವಿಂದರ್ ಸಿಂಗ್ ಅವರ ಪತ್ನಿಯನ್ನು ವಂಚಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ಸುಕೇಶ್ ಚಂದ್ರಶೇಖರ್ ಅವರನ್ನು 2021ರಲ್ಲಿ ಜಾರಿ ನಿರ್ದೇಶನಾಲಯ ಬಂಧಿಸಿತ್ತು. ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಸುಕೇಶ್ ಮೇಲೆ ಎರಡು ಪ್ರತ್ಯೇಕ ಪ್ರಕರಣಗಳನ್ನು ಇಡಿ ದಾಖಲಿಸಿದೆ.










