ಶಿವಮೊಗ್ಗ: ಮಾರ್ಚ್ 1 ರಿಂದ ಸರ್ಕಾರಿ ನೌಕರರು ತಮ್ಮ ಕೆಲಸಕ್ಕೆ ಗೈರು ಹಾಜರಾಗುವ ಮೂಲಕ ಅನಿರ್ದಿಷ್ಟಾವಧಿ ಮುಷ್ಕರ ಮಾಡಲು ನಿರ್ಧರಿಸಿದ್ದೇವೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್ ಷಡಕ್ಷರಿ ಹೇಳಿದ್ದಾರೆ.
ಶಿವಮೊಗ್ಗ ಜಿಲ್ಲಾ ಸರ್ಕಾರಿ ನೌಕರರ ಸಂಘದ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರಿ ನೌಕರರ ಬೇಡಿಕೆಯಾದ ವೇತನ ಪರಿಷ್ಕರಣೆಗೆ ಸಂಬಂಧಿಸಿದ ಮಧ್ಯಂತರ ವರದಿಯನ್ನು 7ನೇ ವೇತನ ಆಯೋಗ ಜಾರಿ ಹಾಗೂ ಎನ್‍ಪಿಎಸ್ ರದ್ದುಪಡಿಸಿ, ಒಪಿಎಸ್ ಯೋಜನೆಯನ್ನು ಜಾರಿ ಮಾಡಬೇಕೆಂಬ ಬೇಡಿಕೆಯನ್ನಿಟ್ಟುಕೊಂಡು ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಮುಂದಾಗಿರುವುದಾಗಿ ತಿಳಿಸಿದ್ದಾರೆ.
ನಮ್ಮದು ನ್ಯಾಯಯುತವಾದ ಹಾಗೂ ಸರಳ ಬೇಡಿಕೆಯಾಗಿದೆ. ಈಗಾಗಲೇ ನಾವು ನಮ್ಮ ಬೇಡಿಕೆ ಹೋರಾಟದ ಕುರಿತು ಮನವಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಅಧಿಕಾರಿಗಳ ಮಟ್ಟದಲ್ಲಿ ನಮ್ಮ ಜೊತೆ ಮಾತನಾಡಿದ್ದಾರೆ. ಸೋಮವಾರ ಸಹ ನಮ್ಮ ಜೊತೆ ಮಾತನಾಡಲು ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು ಕರೆದಿದ್ದಾರೆ. ನಾವು ಸೋಮವಾರವು ಸಹ ಮಾತನಾಡುತ್ತೇವೆ. ಅವರು ಮಾತುಕತೆಗೆ ಎಷ್ಟು ಬಾರಿ ಕರೆದರು ಹೋಗಿ ಮಾತನಾಡಲು ಸಿದ್ಧವಾಗಿದ್ದೇವೆ. ನಮ್ಮ ಬೇಡಿಕೆ ಈಡೇರುವವರೆಗೂ ಮುಷ್ಕರ ಮುಂದುವರೆಯುತ್ತದೆ ಎಂದರು.
ನಮ್ಮ ವೇತನ ಆಯೋಗದ ಕುರಿತು ಬಜೆಟ್‍ನಲ್ಲಿ ಘೋಷಣೆ ಮಾಡುವ ಕುರಿತ ನಿರೀಕ್ಷೆ ಇತ್ತು. ಆದರೆ ಅಲ್ಲಿ ಘೋಷಣೆ ಮಾಡದೆ ನಮಗೆಲ್ಲಾ ನಿರಾಸೆಯನ್ನುಂಟು ಮಾಡಲಾಗಿದೆ. ಇದರಿಂದ ನಾವು ಈ ತೀರ್ಮಾನಕ್ಕೆ ಬಂದಿದ್ದೇವೆ. ನಮ್ಮ ನೌಕರರ ಸಂಘದವರು ಯಾರು ಸಹ ಧಿಕ್ಕಾರ ಕೂಗಲ್ಲ, ಪ್ರತಿಭಟನೆ ಮಾಡಲ್ಲ, ನಮ್ಮ ಹಾಗೂ ಕುಟುಂಬದ ಭವಿಷ್ಯದ ದೃಷ್ಟಿಯಿಂದ ನಾವು ಕರ್ತವ್ಯಕ್ಕೆ ಗೈರಾಗುತ್ತಿದ್ದೇವೆ ಎಂದು ತಿಳಿಸಿದ್ದಾರೆ.










