ಮುಂಬೈ : ರಸ್ತೆ ಅಪಘಾತದ ಗಲಾಟೆ ಪ್ರಕರಣದ ಅಪರಾಧಿಗೆ ದಿನಕ್ಕೆ 5 ಬಾರಿ ನಮಾಜ್ ಮಾಡುವಂತೆ ಮತ್ತು ನಿತ್ಯ 2 ಸಸಿಗಳನ್ನು ನೆಟ್ಟು ಪೋಷಣೆ ಮಾಡಬೇಕೆಂದು ಮಹಾರಾಷ್ಟ್ರದ ಮಾಲೆಗಾಂವ್ ನ ಮ್ಯಾಜಿಸ್ಟ್ರೇಟ್ ಕೋರ್ಟ್ ವಿಭಿನ್ನ ಆದೇಶ ಹೊರಡಿಸಿದೆ.
ಮ್ಯಾಜಿಸ್ಟ್ರೇಟ್ ತೇಜ್ವಂತ್ ಸಿಂಗ್ ಸಂಧು ಈ ಆದೇಶವನ್ನು ಫೆ.27 ರಂದು ಪ್ರಕಟಿಸಿದ್ದು, 1958ರ ಅಪರಾಧಿಗಳ ಪ್ರೊಬೇಶನ್ ಆಕ್ಟ್ ನ ಸೆಕ್ಷನ್ 3 ಅಪರಾಧವನ್ನು ಪುನರಾವರ್ತಿಸದಂತೆ ಎಚ್ಚರಿಕೆ ನೀಡಿ ಅಪರಾಧಿಯನ್ನು ಬಿಡುಗಡೆ ಮಾಡಲು ಮ್ಯಾಜಿಸ್ಟ್ರೇಟ್ ಗೆ ಅಧಿಕಾರವನ್ನು ನೀಡುತ್ತದೆ ಎಂದು ಆದೇಶದಲ್ಲಿ ಹೇಳಿದ್ದಾರೆ.
ಈ ಪ್ರಕರಣದಲ್ಲಿ ಕೇವಲ ಎಚ್ಚರಿಕೆ ಸಾಕಾಗುವುದಿಲ್ಲ. ಆದರೆ ಅಪರಾಧಿಗೆ ತಾನು ಮಾಡಿದ ಅಪರಾದದ ನೆನಪು ಇರಬೇಕು ಹಾಗೂ ಆತ ಅದನ್ನು ಪುನರಾವರ್ತಿಸಬಾರದು. ನನ್ನ ಪ್ರಕಾರ, ಸೂಕ್ತ ಎಚ್ಚರಿಕೆ ಎಂದರೆ, ಅಪರಾಧಿ ತನ್ನ ಅಪರಾಧವನ್ನು ನೆನಪಿನಲ್ಲಿಟ್ಟುಕೊಂಡು ಅದನ್ನೇ ಇನ್ನೆಂದೂ ಪುನರಾವರ್ತಿಸಬಾರದಂತೆ ಮಾಡುವುದಾಗಿದೆ ಎಂದು ಮ್ಯಾಜಿಸ್ಟ್ರೇಟ್ ಅಭಿಪ್ರಾಯಪಟ್ಟಿದ್ದಾರೆ.
ವಿಚಾರಣೆ ಸಂದರ್ಭದಲ್ಲಿ ಖಾನ್ ತಾನು ದಿನನಿತ್ಯ ನಮಾಜ್ ಮಾಡುತ್ತಿಲ್ಲ ಎಂಬ ಅಂಶ ಬಹಿರಂಗವಾಗಿದೆ. ಆದ್ದರಿಂದ ಕೋರ್ಟ್ ಆತನಿಗೆ ಫೆ.28 ರಿಂದ 21 ದಿನಗಳ ಕಾಲ ದಿನಕ್ಕೆ 5 ಬಾರಿ ನಮಾಜ್ ಮಾಡಬೇಕೆಂದು ಹೇಳಿದ್ದು, ಸೋನಾಪುರ ಮಸೀದಿಯ ಆವರಣದಲ್ಲಿ ದಿನಕ್ಕೆ 2 ಸಸಿಗಳನ್ನು ನೆಟ್ಟು ಅದರ ಪೋಷಣೆ ಮಾಡಬೇಕೆಂದು ಆದೇಶ ನೀಡಿದೆ.
30 ವರ್ಷದ ಅಪರಾಧಿ ರೌಫ್ ಖಾನ್, 2010 ರ ಪ್ರಕರಣವೊಂದರಲ್ಲಿ ರಸ್ತೆ ಅಪಘಾತ ಗಲಾಟೆಯೊಂದರಲ್ಲಿ ವ್ಯಕ್ತಿಯೋರ್ವನಿಗೆ ಥಳಿಸಿ ಘಾಸಿಗೊಳಿಸಿದ್ದ. ಖಾನ್ ವಿರುದ್ಧ ಐಪಿಸಿ ಸೆಕ್ಷನ್ 323 (ಸ್ವಯಂ ಪ್ರೇರಿತನಾಗಿ ಘಾಸಿಗೊಳಿಸುವುದು) 325 ( ಸ್ವಯಂಪ್ರೇರಣೆಯಿಂದ ಗಂಭೀರವಾದ ಗಾಯವನ್ನು ಉಂಟುಮಾಡುವುದು) ಸೆಕ್ಷನ್ 504 (ಶಾಂತಿ ಭಂಗವನ್ನು ಪ್ರಚೋದಿಸುವುದು, ಉದ್ದೇಶಪೂರ್ವಕ ಅವಮಾನ) ಹಾಗೂ 506 ಅಡಿಯಲ್ಲಿ (ಕ್ರಿಮಿನಲ್ ಬೆದರಿಕೆ) ಪ್ರಕರಣಗಳು ದಾಖಲಾಗಿದ್ದವು.










