ಹುಬ್ಬಳಿ : ತಹಶೀಲ್ದಾರರೊಬ್ಬರು ಕಾಟಾಚಾರಕ್ಕೆ ಜಗದ್ಗುರು ರೇಣುಕಾಚಾರ್ಯ ಜಯಂತಿಯನ್ನು ಆಚರಣೆ ಮಾಡಿ ಬಳಿಕ ಬಹಿರಂಗವಾಗಿ ಪ್ರತಿಭಟನಾ ನಿರತ ಸ್ವಾಮೀಜಿ ಕಾಲಿಗೆ ಬಿದ್ದು ಕ್ಷಮೆ ಯಾಚಿಸಿರುವ ಘಟನೆ ಜಿಲ್ಲೆಯ ಕಲಘಟಗಿ ತಾಲೂಕಿನಲ್ಲಿ ನಡೆದಿದೆ.
ಕಲಘಟಗಿ ತಾಲೂಕು ಆಡಳಿತದಿಂದ ಯಾವುದೇ ಪೂರ್ವಭಾವಿ ಸಭೆ ಕರೆಯದೇ ಹಾಗೂ ಕಚೇರಿ ಸಿಬ್ಬಂದಿ ಬರ್ಮುಡಾ ಧರಿಸಿ ಕಚೇರಿಯಲ್ಲಿ ರೇಣುಕಾಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ್ದರು. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಇದರಿಂದ ಆಕ್ರೋಶಗೊಂಡ ವೀರಶೈವ ಸಮಾಜದ ಮುಖಂಡರು, ಜಗದ್ಗುರುಗಳಿಗೆ ಅಪಮಾನ ಮಾಡಲಾಗಿದೆ ಎಂದು ಹನ್ನೆರಡು ಎತ್ತಿನ ಮಠದ ಪೀಠಾಧಿಪತಿ ರೇಣುಕಾಚಾರ್ಯರ ನೇತೃತ್ವದಲ್ಲಿ ತಹಶೀಲ್ದಾರ್ ಕಚೇರಿಗೆ ತೆರಳಿ ಪ್ರತಿಭಟನೆ ನಡೆಸಿದ್ದರು.
ತಹಶೀಲ್ದಾರ್ ಯಲ್ಲಪ್ಪ ಗೋಣೆನ್ನನವರನ್ನು ಪ್ರತಿಭಟನಾನಿರತರು ತರಾಟೆಗೆ ತಗೆದುಕೊಂಡಿದ್ದರು. ಈ ವೇಳೆ ತಪ್ಪಿನ ಅರಿವಾಗಿ ತಹಶೀಲ್ದಾರ್ ಶ್ರೀಗಳ ಕಾಲಿಗೆ ಬಿದ್ದು, ಕ್ಷಮೆ ಕೇಳಿದ್ದಾರೆ. ಜೊತೆಗೆ ಮತ್ತೊಮ್ಮೆ ಜಯಂತಿಯನ್ನ ಅದ್ಧೂರಿಯಾಗಿ ಮಾಡುವುದಾಗಿ ಭರವಸೆ ನೀಡಿದ್ದಾರೆ.










