ಬೆಂಗಳೂರು: ನಾಸಾ ಮತ್ತು ಇಸ್ರೋ ಜಂಟಿಯಾಗಿ ಅಭಿವೃದ್ಧಿಪಡಿಸಿದ ನಿಸಾರ್ ಉಪಗ್ರಹವನ್ನು ಹೊತ್ತ ಅಮೆರಿಕನ್ ವಾಯುಪಡೆಯ ಸಿ-17 ಸಾರಿಗೆ ವಿಮಾನವು, ಅಮೆರಿಕದ ಕ್ಯಾಲಿಫೋರ್ನಿಯಾದಿಂದ ಹೊರಟು ಬೆಂಗಳೂರಿಗೆ ಬಂದಿಳಿದಿದೆ.
ನಿಸಾರ್ ಉಪಗ್ರಹವು ಭೂಮಿಯ ಪರಿಸರ ವ್ಯವಸ್ಥೆಗಳಲ್ಲಿನ ಬದಲಾವಣೆಗಳನ್ನು ಅಳೆಯುತ್ತದೆ. ಅಲ್ಲದೇ, ಭೂಕಂಪಗಳು ಮತ್ತು ಜ್ವಾಲಾಮುಖಿ ಸ್ಫೋಟಗಳು, ಸಮುದ್ರ ಮಟ್ಟ ಏರಿಕೆ ಮುಂತಾದ ನೈಸರ್ಗಿಕ ವಿಕೋಪಗಳ ಎಚ್ಚರಿಕೆ ಚಿಹ್ನೆಗಳನ್ನೂ ಕೂಡ ಇದು ಗುರುತಿಸುತ್ತದೆ.
ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ ಹಿಮಾಲಯ ಮತ್ತು ಭೂ ಕುಸಿತ ಪೀಡಿತ ಪ್ರದೇಶಗಳಲ್ಲಿನ ಹಿಮನದಿಗಳ ಮೇಲೆ ನಿಗಾ ಇಡಲು ಈ ಉಪಗ್ರಹದ ಸಹಾಯ ಪಡೆಯಲು ಬಳಸಲಾಗುತ್ತಿದೆ. ಎಸ್ಯುವಿ ಗಾತ್ರದ ಉಪಗ್ರಹವು ಸುಮಾರು 2 ಸಾವಿರದ 8 ನೂರು ಕೆ.ಜಿ ಭಾರವಿದೆ. L ಮತ್ತು S-ಬ್ಯಾಂಡ್ ಸಿಂಥೆಟಿಕ್ ಅಪರ್ಚರ್ ರೆಡಾರ್ ಉಪಕರಣಗಳನ್ನು ಕೂಡಾ ಒಳಗೊಂಡಿದೆ.
ನಿಸಾರ್ ಉಪಗ್ರಹ ಮೋಡಗಳನ್ನು ಭೇದಿಸುವ ಮತ್ತು ಹವಾಮಾನ ಪರಿಸ್ಥಿತಿಗಳನ್ನು ಲೆಕ್ಕಿಸದೆ, ಹೆಚ್ಚಿನ ರೆಸಲ್ಯೂಶನ್ ಚಿತ್ರಗಳನ್ನು ಸೆರೆ ಹಿಡಿಯುವ ಸಾಮರ್ಥ್ಯ ಹೊಂದಿದೆ. ಇದನ್ನು 2024 ರಲ್ಲಿ ಆಂಧ್ರಪ್ರದೇಶದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಧ್ರುವೀಯ ಕಕ್ಷೆಗೆ ಉಡಾವಣೆ ಮಾಡುವ ನಿರೀಕ್ಷೆಯಿದೆ. ಈ ಉಪಗ್ರಹ ಕನಿಷ್ಠ ಮೂರು ವರ್ಷಗಳ ಕಾರ್ಯಾಚರಣಾ ಅವಧಿಯನ್ನು ಹೊಂದಿರಲಿದೆ.










