ಸತತ 8 ಗಂಟೆಗಳ ಕಾಲ ಈಜಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ಗೆ ಸೇರಿದ ಬಾಲಕಿ.

47
firstsuddi

ಛತ್ತೀಸ್​ಗಢ : 15 ವರ್ಷದ ಬಾಲಕಿಯೊಬ್ಬಳು ಸತತ 8 ಗಂಟೆಗಳ ಕಾಲ ಈಜುವ ಮೂಲಕ ವಿಶ್ವದಾಖಲೆ ಮಾಡಿದ್ದಾರೆ. ಹೌದು ಛತ್ತೀಸ್​ಗಢದ ದುರ್ಗ್ ಜಿಲ್ಲೆಯ ಪುರೈ ಗ್ರಾಮದ 15 ವರ್ಷದ ಬಾಲಕಿ ಚಂದ್ರಕಲಾ ಓಜಾ 8 ಗಂಟೆಗಳ ಕಾಲ ನಿರಂತರವಾಗಿ ಈಜುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ಗೆ ಸೇರ್ಪಡೆಯಾಗಿದ್ದಾರೆ.

ನಿನ್ನೆ ಬೆಳಗ್ಗೆ 5 ಗಂಟೆಗೆ ಈಜಲು ಪ್ರಾರಂಭಿಸಿದ ಚಂದ್ರಕಲಾ ಮಧ್ಯಾಹ್ನ 1 ಗಂಟೆಯವರೆಗೂ ಈಜಿದ್ದಳು. ಈ ವೇಳೆ ಗ್ರಾಮದ ಜನತೆ ಈ ದಾಖಲೆಯನ್ನು ಕಣ್ತುಂಬಿಕೊಂಡಿದ್ದು, ಮಾತ್ರವಲ್ಲದೇ ಆಕೆಯನ್ನು ಹುರಿದುಂಬಿಸುತ್ತಿದ್ದರು.

ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ತಂಡವು ಚಂದ್ರಕಲಾ ಅವರ ಈಜುವಿಕೆಯ ಸಂಪೂರ್ಣ ವಿಡಿಯೋ ರೆಕಾರ್ಡಿಂಗ್ ಮಾಡಿದೆ. ರಾಜ್ಯ ಗೃಹ ಸಚಿವ ತಾಮ್ರಧ್ವಜ್ ಸಾಹು ಕೂಡ ಸ್ಥಳಕ್ಕೆ ಆಗಮಿಸಿ ಚಂದ್ರಕಲಾ ಅವರನ್ನು ಅಭಿನಂದಿಸಿದರು. ದಾಖಲೆ ಬರೆದ ಚಂದ್ರಕಲಾ ಕೆರೆಯಿಂದ ಹೊರಬಂದ ಕೂಡಲೇ ಜನ ಚಪ್ಪಾಳೆ ತಟ್ಟಿ ಅಭಿನಂದಿಸಿದರು.

ದಾಖಲೆ ನಿರ್ಮಿಸಿದ ಬೆನ್ನಲ್ಲೇ ಮಾಧ್ಯಮಗಳೊಂದಿಗೆ ಮಾತನಾಡಿದ ಚಂದ್ರಕಲಾ, ಈಜಿನಲ್ಲಿ ವಿಶ್ವ ದಾಖಲೆ ನಿರ್ಮಿಸುವುದು ಸಂತಸ ತಂದಿದೆ. ನನ್ನ ಈ ಪ್ರಯತ್ನಕ್ಕೆ ಪೋಷಕರು, ಗ್ರಾಮದ ಜನರು ಹಾಗೂ ಗೃಹ ಸಚಿವರು ಸಂಪೂರ್ಣ ಬೆಂಬಲ ನೀಡಿ ಮಾಡಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

10ನೇ ತರಗತಿ ವಿದ್ಯಾರ್ಥಿನಿಯಾಗಿರುವ ಚಂದ್ರಕಲಾ, ತನ್ನ 5ನೇ ವಯಸ್ಸಿನಿಂದ ಈಜು ಅಭ್ಯಾಸ ಮಾಡುತ್ತಿದ್ದು, ರಾಷ್ಟ್ರ ಮತ್ತು ರಾಜ್ಯ ಮಟ್ಟದ ಆಟಗಾರರ ಕುಟುಂಬದಿಂದ ಬಂದವರು. ಜ್ಯೂನಿಯರ್ ಓಪನ್ ರಾಷ್ಟ್ರೀಯ ಮತ್ತು ರಾಜ್ಯ ಚಾಂಪಿಯನ್​ಶಿಪ್​ಗಳಲ್ಲಿ 3 ಚಿನ್ನ, 2 ಬೆಳ್ಳಿ ಪದಕಗಳನ್ನು ಅವರು ಗೆದ್ದಿದ್ದಾರೆ.