ಬಿಸಿಲಿನ ತಾಪದಿಂದ ಹಳಿಯ ರಬ್ಬರ್‌ಗೆ ಬೆಂಕಿ – ನಮ್ಮ ಮೆಟ್ರೋ ಸಂಚಾರ 20 ನಿಮಿಷ ಬಂದ್…

55
firstsuddi

ಬೆಂಗಳೂರು : ಕರ್ನಾಟಕದಲ್ಲಿ ತಾಪಮಾನ ದಿನೇ ದಿನೇ ಹೆಚ್ಚುತ್ತಿದೆ. ಬಿಸಿಲಿನ ಝಳಕ್ಕೆ ಸಾರ್ವಜನಿಕರು ಬಸವಳೆಯುತ್ತಿದ್ದಾರೆ. ಅದೇ ರೀತಿ ಬೆಂಗಳೂರಿನಲ್ಲೂ ಸಹ ಬಿಸಿಲು ತೀವ್ರ ಪ್ರಮಾಣ ಮುಟ್ಟಿದೆ.

ಬಿಸಿಲಿನ ಎಫೆಕ್ಟ್ ಗೆ ನಮ್ಮ ಮೆಟ್ರೋ ರೈಲಿನ ಹಳಿಯ ರಬ್ಬರ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 20 ನಿಮಿಷಗಳ ಕಾಲ ಮೆಟ್ರೋ ರೈಲು ಸಂಚಾರವನ್ನು ಬಂದ್ ಮಾಡಿದ ಘಟನೆ ನಡೆದಿದೆ. ನಿನ್ನೆ ಬೆಳಗ್ಗೆ 11 ಘಂಟೆಗೆ ನೇರಳೆ ಮಾರ್ಗದ ವಿವೇಕಾನಂದ ಮೆಟ್ರೋ ನಿಲ್ದಾಣದ ಬಳಿ ಬರುತ್ತಲೇ ಈ ಘಟನೆ ನಡೆದಿದೆ. ಸೂರ್ಯನ ಶಾಖದಿಂದಾಗಿ ಮೆಟ್ರೋ ಹಳಿಯ ರಬ್ಬರ್ ಗೆ ಬೆಂಕಿ ತಗುಲಿದ್ದನ್ನು ಗಮನಿಸಿದ ಚಾಲಕ, ತಕ್ಷಣ ಮುನ್ನೆಚ್ಚರಿಕೆಯ ಕ್ರಮವಾಗಿ ರೈಲು ನಿಲ್ಲಿಸಿದ್ದಾರೆ.

ಅದಾದ ಬಳಿಕ ಚಾಲಕ ಸ್ಟೇಷನ್ ಮಾಸ್ಟರ್ ಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ವಿವೇಕಾನಂದ ಮೆಟ್ರೋ ನಿಲ್ದಾಣದ ಬಳಿಯಿದ್ದ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ ಬೆಂಕಿ ಆರಿಸಿದರು. ಮೆಟ್ರೋ ಹಳಿಯ ರಬ್ಬರ್ ನಲ್ಲಿ ಬೆಂಕಿ ಕಾಣಿಸಿಕೊಂಡ ಕಾರಣ ನಮ್ಮ ಮೆಟ್ರೋ ಸೇವೆ 20 ನಿಮಿಷ ಸ್ಥಗಿತಗೊಂಡಿತ್ತು. ನಂತರ ಮತ್ತೆ ಮೆಟ್ರೋ ಸೇವೆ ಆರಂಭವಾಗಿದ್ದು ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಮೆಟ್ರೋ ಅಧಿಕಾರಿಗಳು, ಬಿಸಿಲಿನ ಶಾಖದಿಂದಾಗಿ ಮೆಟ್ರೋ ಹಳಿಯ ರಬ್ಬರ್‌ಗೆ ಬೆಂಕಿ ಕಿಡಿ ಹೊತ್ತಿಕೊಂಡಿತ್ತು. ಚಾಲಕನ ಗಮನಕ್ಕೆ ಬಂದ ತಕ್ಷಣ ರೈಲನ್ನು ನಿಲ್ಲಿಸಿದ್ದಾರೆ. ಬಿಸಿಲಿನ ಝಳದಿಂದ ರಬ್ಬರ್‌ಗೆ ಕಿಡಿ ತಾಕಿರಬಹುದು ಎಂದು ತಿಳಿಸಿದರು.