ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ರೋಡ್ ಶೋ ಮತ್ತೆ ಬದಲಾವಣೆ…

64
firstsuddi

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ಪರವಾಗಿ ಭರ್ಜರಿ ಪ್ರಚಾರದಲ್ಲಿ ತೊಡಗಿರುವ ಪ್ರಧಾನಿ ನರೇಂದ್ರ ಮೋದಿ ರಾಜ್ಯಾದ್ಯಂತ ರೋಡ್ ಶೋಗಳನ್ನು ನಡೆಸುತ್ತಿದ್ದಾರೆ. ಇದೀಗ ಶನಿವಾರ ಹಾಗೂ ಭಾನುವಾರ ಬೆಂಗಳೂರಿನಲ್ಲಿ ನಿಗದಿಯಾಗಿದ್ದ ರೋಡ್ ಶೋನಲ್ಲಿ ಮತ್ತೆ ಬದಲಾವಣೆ ಮಾಡಲಾಗಿದೆ.

ಮೋದಿ ರೋಡ್ ಶೋ ನಡೆಯಲಿರುವ ದಿನ ಪ್ರಮುಖ ರಸ್ತೆಗಳನ್ನು ಬಂದ್ ಮಾಡುವುದಾಗಿ ಪೊಲೀಸರು ಸೂಚನೆ ನೀಡಿದ್ದಾರೆ. ಆದರೆ ಭಾನುವಾರ ನೀಟ್ ಪರೀಕ್ಷೆ ಹಿನ್ನೆಲೆ ರೋಡ್ ಶೋ ರೂಟ್‌ನಲ್ಲಿ ಬದಲಾವಣೆ ಮಾಡಲಾಗಿದ್ದು, ಟ್ರಾಫಿಕ್ ಸಮಸ್ಯೆ ಆಗಬಹುದು ಅನ್ನೋ ಕಾರಣಕ್ಕೆ ಪ್ರಧಾನಿ ಕಚೇರಿ ನಿರ್ದೇಶನದಂತೆ ಕಾರ್ಯಕ್ರಮದಲ್ಲಿ ಬದಲಾವಣೆ ಮಾಡಲಾಗಿದೆ.

ಭಾನುವಾರ ಬೆಳಗ್ಗೆ ನಿಗದಿಯಾಗಿದ್ದ ರೋಡ್ ಶೋವನ್ನು ಶನಿವಾರಕ್ಕೆ ಫಿಕ್ಸ್ ಮಾಡಲಾಗಿದ್ದು, ಶನಿವಾರ ಬೆಳಗ್ಗೆ ನಿಗದಿಯಾಗಿದ್ದ ರೋಡ್ ಶೋ ಭಾನುವಾರಕ್ಕೆ ನಿಗದಿ ಮಾಡಲಾಗಿದೆ. ಜೊತೆಗೆ ರೋಡ್ ಶೋ ಸಾಗುವ ದೂರವನ್ನೂ ಕಡಿತ ಮಾಡಲಾಗಿದೆ.

ಶನಿವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 12.30ರವರೆಗೆ ರೋಡ್ ಶೋ ನಡೆಯಲಿದ್ದು, ಜೆ.ಪಿ. ನಗರದ ಬ್ರಿಗೇಡ್ ಮಿಲೇನಿಯಂನಿಂದ ರೋಡ್ ಶೋ ಆರಂಭವಾಗಲಿದೆ. ಮಲ್ಲೇಶ್ವರಂನ ಸರ್ಕಲ್ ಮಾರಮ್ಮ ಟೆಂಪಲ್‌ವರೆಗೆ ರೋಡ್ ಶೋ ಮಾಡಲಿದ್ದಾರೆ.

ಭಾನುವಾರ ಬೆಳಗ್ಗೆ 10 ಗಂಟೆಯಿಂದ 11:30 ರವರೆಗೆ ರೋಡ್ ಶೋ ನಡೆಯಲಿದ್ದು, ಇದು ಸುರಂಜನ್ ದಾಸ್ ಸರ್ಕಲ್ ನಿಂದ ಟ್ರಿನಿಟಿ ಸರ್ಕಲ್ ವರೆಗೆ ಸಾಗಲಿದೆ. ಮಾತ್ರವಲ್ಲದೇ ಭಾನುವಾರ ನಡೆಯುವ ರೋಡ್ ಶೋದಲ್ಲಿ 4 ಕಿ.ಮೀ ಕಡಿತ ಮಾಡಲಾಗಿದೆ.

ಮೋದಿ ರೋಡ್ ಶೋಗೆ ಈಗಾಗಲೇ ಪೊಲೀಸರು, ಬಿಬಿಎಂಪಿ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ರಸ್ತೆಯ ಎರಡು ಬದಿಯಲ್ಲಿ ಬ್ಯಾರಿಕೇಡ್ ಹಾಕಲಾಗಿದ್ದು, ರೋಡ್ ಶೋ ನಡೆಯುವ ರಸ್ತೆಯಲ್ಲಿರುವ ಮರದ ಕೊಂಬೆಗಳನ್ನು ಕತ್ತರಿಸುವ ಕೆಲಸ ನಡೆಯುತ್ತಿದೆ. ಅಲ್ಲದೇ ರೋಡ್ ಶೋ ಸಾಗುವ ರಸ್ತೆಗಳಲ್ಲಿ ಸ್ಚಚ್ಛತೆ ಕಾರ್ಯವೂ ಸಹ ನಡೆಯುತ್ತಿದೆ. ದಾರಿಯುದ್ದಕ್ಕೂ ಪೊಲೀಸರ ಬಿಗಿ ಭದ್ರತೆಯನ್ನು ಮಾಡಲಾಗಿದೆ.