ಗುರುದ್ವಾರದ ಬಳಿ ಮದ್ಯಪಾನ ಮಾಡುತ್ತಿದ್ದ ಮಹಿಳೆಗೆ ಗುಂಡಿಕ್ಕಿ ಹತ್ಯೆ…

51
firstsuddi

ಚಂಡೀಗಢ: ಗುರುದ್ವಾರದ ಬಳಿ ಮದ್ಯಪಾನ ಮಾಡುತ್ತಿದ್ದ ಮಹಿಳೆಯನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಪಂಜಾಬ್‌ನ ಪಟಿಯಾಲದಲ್ಲಿ ನಡೆದಿದೆ.

ಪರ್ಮಿಂದರ್ ಕೌರ್ (32) ಹತ್ಯೆಯಾದ ಮಹಿಳೆ. ಗುರುದ್ವಾರಕ್ಕೆ ನಿತ್ಯ ಭೇಟಿ ನೀಡುತ್ತಿದ್ದ ನಿರ್ಮಲಜಿತ್ ಸಿಂಗ್ ಸೈನಿ ಮಹಿಳೆ ಮೇಲೆ 5 ಸುತ್ತು ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ ಎಂದು ಪಟಿಯಾಲ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ವರುಣ್ ಶರ್ಮಾ ತಿಳಿಸಿದ್ದಾರೆ.

ವರದಿಗಳ ಪ್ರಕಾರ ನಿನ್ನೆ ರಾತ್ರಿ ಪರ್ಮಿಂದರ್ ಕೌರ್ ದುಖ್ನಿವಾರ್ನ್ ಸಾಹಿಬ್ ಗುರುದ್ವಾರದ ಪವಿತ್ರ ನೀರಿನ ಕೊಳದ ಬಳಿ ಮದ್ಯಪಾನ ಮಾಡುತ್ತಿದ್ದಳು. ಇದನ್ನು ಗಮನಿಸಿದ ಕೆಲವರು ಅವರನ್ನು ಮ್ಯಾನೇಜರ್ ಕಚೇರಿಗೆ ಕರೆದೊಯ್ದರು. ಈ ವೇಳೆ ಸ್ಥಳದಲ್ಲಿದ್ದ ನಿರ್ಮಲಜಿತ್ ಸಿಂಗ್ ಸೈನಿ ಎಂಬಾತ ಕೋಪದಿಂದ ಆಕೆಯ ಮೇಲೆ ಐದು ಬಾರಿ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ.

ಮಹಿಳೆಯನ್ನು ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆರೋಪಿ ನಿರ್ಮಲಜಿತ್ ಸಿಂಗ್‌ನನ್ನು ಬಂಧಿಸಲಾಗಿದ್ದು, ಆತನ ಬಳಿ ಇದ್ದ ರಿವಾಲ್ವರನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ನಿರ್ಮಲಜಿತ್ ಆಸ್ತಿ ಡೀಲರ್ ಆಗಿದ್ದು, ಆತನಿಗೆ ಯಾವುದೇ ಅಪರಾಧ ಹಿನ್ನೆಲೆ ಇಲ್ಲ ಎಂದು ಪೊಲೀಸರು ಹೇಳಿದ್ದಾರೆ.