ಮೂರನೇ ಪತ್ನಿಗಾಗಿ ತನ್ನ ಸ್ವಂತ ಮಗನನ್ನೇ ಕತ್ತು ಹಿಸುಕಿ ಕೊಂದ ಪಾಪಿ ತಂದೆ!

43
firstsuddi

ಭೋಪಾಲ್: ಮೂರನೇ ಪತ್ನಿಗಾಗಿ ತನ್ನ ಸ್ವಂತ ಮಗನನ್ನೇ ವ್ಯಕ್ತಿಯೊಬ್ಬ ಕತ್ತು ಹಿಸುಕಿ ಕೊಲೆಗೈದ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಿನ್ನೆ ವರದಿಯಾಗಿದೆ.

ಏಳು ವರ್ಷದ ಪ್ರತೀಕ್ ಕೊಲೆಯಾದ ದುರ್ದೈವಿಯಾಗಿದ್ದು, ಈತ 3ನೇ ಕ್ಲಾಸಿನಲ್ಲಿ ಓದುತ್ತಿದ್ದ. ಪ್ರತೀಕ್ ಪ್ರತಿನಿತ್ಯ ತನ್ನ ಅಜ್ಜಿ ಜೊತೆನೇ ಮಲಗುತ್ತಿದ್ದ. ಆದರೆ ಭಾನುವಾರ ಆರೋಪಿ ತಂದೆ ಶಶಿಪಾಲ್, ಕೂಲರ್ ಹಾಕಿದ್ದೀನಿ. ಇವತ್ತು ತನ್ನ ಜೊತೆ ಮಲಗುವಂತೆ ಒತ್ತಾಯಿಸಿದ್ದ. ಕೂಲರ್ ಇದೆ ಅಂದ ತಕ್ಷಣ ಬಾಲಕ, ಅಜ್ಜಿ ಜೊತೆ ತಾನು ಇಂದು ತಂದೆ ಜೊತೆ ಮಲಗುವುದಾಗಿ ಹೇಳಿದ್ದಾನೆ. ಅಂತೆಯೇ ಪ್ರತೀಕ್ ತಂದೆ ಜೊತೆ ಕೋಣೆಯಲ್ಲಿ ಮಲಗಿದ್ದನು. ಬಳಿಕ ಮುಂಜಾನೆ ಆತನ ಶವ ಪತ್ತೆಯಾಗಿದೆ.

ಪೊಲೀಸರ ಪ್ರಕಾರ, ಮಗ ಪ್ರತೀಕ್ ಮಲಗಿದ್ದಾಗ ಶಶಿಪಾಲ್ ಟಿವಿ ವಾಲ್ಯೂಮ್ ಹೆಚ್ಚಿಸಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಅಲ್ಲದೆ ಇದೇ ವೇಳೆ ಆತ ತನ್ನ ಪತ್ನಿಗೆ ವಿಡಿಯೋಕಾಲ್ ಮಾಡಲು ಯತ್ನಿಸಿದನಾದರೂ ಆಕೆ ಸ್ವೀಕರಿಸಲಿಲ್ಲ. ಮಗನನ್ನು ಕತ್ತು ಹಿಸುಕಿ ಕೊಲೆ ಮಾಡಿದ ದೃಶ್ಯವನ್ನು ಕೂಡ ಸೆರೆಹಿಡಿದು ಶಶಿಪಾಲ್ ತನ್ನ ಮೂರನೇ ಪತ್ನಿ ಪಾಯಲ್ ಗೆ ವಾಟ್ಸಪ್ ಮೂಲಕ ಕಳುಹಿಸಿದ್ದಾನೆ. ಆದರೆ ಅವಳು ಅದಾಗಲೇ ಈತನ ನಂಬರ್ ಬ್ಲಾಕ್ ಮಾಡಿದ್ದರಿಂದ ವೀಡಿಯೋ ನೋಡಿರಲಿಲ್ಲ. ಘಟನೆ ಬಳಿಕ ಆರೋಪಿ ತಂದೆ ಶಶಿಪಾಲ್ ಪರಾರಿಯಾಗಿದ್ದಾನೆ.

ಘಟನೆಯ ಬಳಿಕ ನನ್ನ ಮೂರನೇ ಪತ್ನಿ ಪಾಯಲ್ ಗೆ ಮಗನನ್ನು ಕೊಲೆಗೈದಿರುವುದಾಗಿ ವೀಡಿಯೋ ಹಾಗೂ ಮೆಸೇಜ್ ಕಳುಹಿಸಿದ್ದೇನೆ. ಇನ್ನು ಮುಂದೆ ನಿನಗೆ ನನ್ನ ಮಗನಿಂದ ತೊಂದರೆಯಾಗಲ್ಲ ಎಂದು ಶಶಿಪಾಲ್ ಹೇಳಿದ್ದಾನೆ.

ಪಾಯಲ್ ಇತ್ತೀಚೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಹೀಗಾಗಿ ಈ ಹಿಂದೆ ಮದುವೆಯಾದ ಪತ್ನಿಯಿಂದ ಹುಟ್ಟಿರುವ ಮಗ ಪ್ರತೀಕ್ ನನ್ನು ಕೊಲೆ ಮಾಡಬೇಕು. ಇಲ್ಲವೆಂದಲ್ಲಿ ತನ್ನ ಪೋಷಕರ ಮನೆಯಿಂದ ಹಿಂತಿರುಗುವುದಿಲ್ಲ ಎಂದು ಶಶಿಪಾಲ್ ಗೆ ಪಾಯಲ್ ಎಚ್ಚರಿಕೆ ನೀಡಿದ್ದಳು. ಶಶಿಪಾಲ್ ಮೂರನೇ ಪತ್ನಿ ಮೊದಲಿನಿಂದಲೂ ಬಾಲಕ ಪ್ರತೀಕ್ ಬಗ್ಗೆ ತುಂಬಾ ಅಸಮಾಧಾನ ಹೊಂದಿದ್ದಳು. ಅವರು ಈ ವಿಷಯದ ಬಗ್ಗೆ ಆಗಾಗ್ಗೆ ಜಗಳವಾಡುತ್ತಿದ್ದರು ಎಂದು ಪೊಲೀಸ್ ಅಧಿಕಾರಿ ಜೈವೀರ್ ಸಿಂಗ್ ಭಡೋರಿಯಾ ಹೇಳಿದ್ದಾರೆ.

ಶಶಿಪಾಲ್ ಮೊಬೈಲ್‍ನಲ್ಲಿ ಕೊಲೆಯ ವೀಡಿಯೋ ಪತ್ತೆಯಾಗಿದೆ. ಆದರೆ ತನಗೂ ಅಪರಾಧಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಪಾಯಲ್ ಹೇಳಿದ್ದಾಳೆ. ನನ್ನ ಪತಿಗೆ ತನ್ನ ಏಳು ವರ್ಷದ ಮಗನನ್ನು ಸಾಯಿಸುವಂತೆ ನಾನು ಯಾವತ್ತೂ ಹೇಳಿಲ್ಲ ಎಂದು ಮಾಧ್ಯಮದವರ ಮುಂದೆ ಹೇಳಿದ್ದಾಳೆ. ಬಳಿಕ ತುರ್ತು ಕಾರ್ಯಾಚರಣೆ ನಡೆಸಿದ ಪೊಲೀಸರು ತಂದೆ ಶಶಿಪಾಲ್ ಮತ್ತು ತಾಯಿ 23 ವರ್ಷದ ಪಾಯಲ್ ರನ್ನು ಬಂಧಿಸಿದ್ದಾರೆ.