ಬೆಂಗಳೂರು: ಜೆಡಿಎಸ್ ಪಕ್ಷ ವಿಸರ್ಜನೆ ಮುಹೂರ್ತ ಯಾವಾಗ ಎಂದು ಟಾಂಗ್ ಕೊಟ್ಟಿದ್ದ ಕಾಂಗ್ರೆಸ್ ಗೆ, ಪಕ್ಷ ವಿಸರ್ಜನೆ ಮಾಡಲ್ಲ ಎಂದು ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಅವರು ತಿರುಗೇಟು ಕೊಟ್ಟಿದ್ದಾರೆ.
ಪಕ್ಷ ವಿಸರ್ಜನೆ, ಅಂತಿಮ ಸಂಸ್ಕಾರದ ಹೇಳಿಕೆ ಕೊಟ್ಟ ಸಂಸ್ಕಾರಹೀನರಿಗೆ ಹೇಳುವುದು ಇಷ್ಟೇ. ನನಗೆ 123 ಸೀಟು ಬಂದಿಲ್ಲ, ಪಂಚರತ್ನ ಜಾರಿಗೆ ಜನರು ಅವಕಾಶವನ್ನೂ ಕೊಟ್ಟಿಲ್ಲ, ಹಾಗಾಗಿ ಪಕ್ಷವನ್ನು ವಿಸರ್ಜನೆ ಮಾಡುವುದೂ ಇಲ್ಲ. ಇನ್ನೇನಾದರೂ ಅನುಮಾನ ಇದ್ದವರು ಬರಲಿ, ಅಂಥವರ ಅಜ್ಞಾನ ಹೋಗಲಾಡಿಸುತ್ತೇನೆ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಚುನಾವಣೆ ಫಲಿತಾಂಶ ಬಂದಿದೆ. ನನಗೆ ಜನರು 123 ಕ್ಷೇತ್ರ ಕೊಡಲಿಲ್ಲ. ಈಗ ಪಂಚರತ್ನ ಜಾರಿ ಹಾಗೂ ಪಕ್ಷ ವಿಸರ್ಜನೆ ಪ್ರಶ್ನೆ ಎಲ್ಲಿ? ಸಾಮಾನ್ಯ ಜ್ಞಾನವೇ ಇಲ್ಲದ ಸಚಿವರಿಗೆ ಈ ಪರಿ ಅಜ್ಞಾನವಿದೆ ಎಂದು ನಾನಂತೂ ಎಣಿಸಿರಲಿಲ್ಲ. ಇಷ್ಟು ಅವಿವೇಕವುಳ್ಳ ಇವರ ಮುಂದಿನ ಆಡಳಿತ ಈಗಲೇ ಆತಂಕವಾಗುತ್ತಿದೆ ಎಂದು ಚಾಟಿ ಬೀಸಿದ್ದಾರೆ.
ಕೆಲವರ ವಿವೇಕರಹಿತ ಹೇಳಿಕೆಗಳಿಗೆ ಉತ್ತರಿಸುವುದು ಬೇಡ ಭಾವಿಸಿದ್ದೆ. ನಾನು ಸೋತ ನೋವಿನಲ್ಲಿದ್ದೇನೆ. ಕಾಂಗ್ರೆಸ್ ನವರು ಗೆದ್ದ ಅಹಂನಲ್ಲಿ ಇದ್ದಾರೆ. ಅಹಂ ಅಳಿಯುತ್ತದೆ ಅನ್ನುವ ಕನಿಷ್ಠ ಅರಿವು ಅವರಿಗೆ ಇದ್ದಂತೆ ಇಲ್ಲ. ಆ ಅರಿವು ಬರುವ ಕಾಲವೂ ದೂರವಿಲ್ಲ. ಕಾಯುವ ತಾಳ್ಮೆ ನನಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದ ಜನತೆಗೆ ನೀಡಿದ್ದ 5 ಗ್ಯಾರಂಟಿಗಳ ಭರವಸೆ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಗುಡುಗಿದ್ದರು. ಇದಕ್ಕೆ ಪ್ರತಿಯಾಗಿ ಹೆಚ್‌ಡಿಕೆಗೆ ಕಾಂಗ್ರೆಸ್ ತಿರುಗೇಟು ನೀಡಿತ್ತು. ನೀವು ಜೆಡಿಎಸ್ ಪಕ್ಷ ವಿಸರ್ಜಿಸುವ ಮುಹೂರ್ತ ಯಾವಾಗ ಎಂದು ಟಾಂಗ್ ಕೊಟ್ಟಿತ್ತು.










