ಗೃಹಲಕ್ಷ್ಮೀ ಯೋಜನೆಗೆ ಮಾರ್ಗಸೂಚಿ ಬಿಡುಗಡೆ…

55
firstsuddi

ಬೆಂಗಳೂರು: ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಸರ್ಕಾರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ. ಕುಟುಂಬದ ನಿರ್ವಹಣೆಯಲ್ಲಿ ಕುಟುಂಬ ಯಜಮಾನಿಯ ಪಾತ್ರ ಪ್ರಮುಖವಾಗಿದೆ. ಯಜಮಾನಿಯು ಆರ್ಥಿಕವಾಗಿ ಸಬಲೀಕರಣಗೊಂಡಲ್ಲಿ ಕುಟುಂಬ ನಿರ್ವಹಣೆಯು ಉತ್ತಮ ಗುಣಮಟ್ಟದಲ್ಲಿರುತ್ತದೆ. ಆದ್ದರಿಂದ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು 2 ಸಾವಿರ ರೂ.ಗಳನ್ನು ನೀಡುವ ‘ಗೃಹಲಕ್ಷ್ಮೀ’ ಯೋಜನೆಯನ್ನು ಜಾರಿಗೆ ತಂದಿದೆ.

ಯೋಜನೆಯನ್ನು 2023-24ನೇ ಸಾಲಿನಲ್ಲಿ ಈ ಕೆಳಕಂಡಂತೆ ಮಾರ್ಗಸೂಚಿ ಹೊರಡಿಸಲಾಗಿದೆ.

1. ಬಿಪಿಎಲ್, ಎಪಿಎಲ್ ಕಾರ್ಡ್​ನಲ್ಲಿ ಕುಟುಂಬದ ಯಜಮಾನಿ ಎಂದು ನಮೂದು ಕಡ್ಡಾಯವಾಗಿದ್ದು, ನಮೂದಿಸಿರುವ ಮಹಿಳೆ ಯೋಜನೆಯ ಅರ್ಹ ಫಲಾನುಭವಿಗಳಾಗಲಿದ್ದಾರೆ.

2. ಒಂದು ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಮಹಿಳೆಯರಿದ್ದರೆ ಒಂದೇ ಮಹಿಳೆಗೆ ಯೋಜನೆ ಅನ್ವಯವಾಗಲಿದೆ.

3. ಕುಟುಂಬದ ಯಜಮಾನಿಯ ಪತಿ ಆದಾಯ ತೆರಿಗೆ ಪಾವತಿಸುತ್ತಿದ್ದರೆ ಗೃಹಲಕ್ಷ್ಮೀ ಅರ್ಹತೆ ಇಲ್ಲ. ಯಜಮಾನಿ ಅಥವಾ ಮಹಿಳೆಯ ಯಜಮಾನ ಜಿಎಸ್‍ಟಿ ಪಾವತಿದಾರರಾಗಿದ್ದರೆ ಯೋಜನೆ ಲಭ್ಯವಿಲ್ಲ. ಜೂ.15ರಿಂದ ಜು.15ರವರೆಗೆ ಸೇವಾಸಿಂಧು ಪೋರ್ಟಲ್​ನಲ್ಲಿ ಅರ್ಜಿ ಸಲ್ಲಿಸಬೇಕು. ಗೃಹಲಕ್ಷ್ಮೀ ಯೋಜನೆಗೆ ಭೌತಿಕವಾಗಿಯೂ ಅರ್ಜಿ ಸಲ್ಲಿಸಲು ಅವಕಾಶವಿದೆ.

4. ಯೋಜನೆ ಲಾಭ ಪಡೆಯಲು ಬ್ಯಾಂಕ್ ಖಾತೆ, ಆಧಾರ್ ಜೋಡಣೆ ಕಡ್ಡಾಯವಾಗಿದೆ. ತಪ್ಪು ಮಾಹಿತಿ ನೀಡಿದರೆ ಗೃಹಲಕ್ಷ್ಮೀ ಯೋಜನೆಯಡಿ ನೀಡಿರುವ ಹಣ ವಸೂಲಿ ಮಾಡುವುದಾಗಿ ಸರ್ಕಾರ ಎಚ್ಚರಿಕೆ ನೀಡಿದೆ.

5. ಈ ಯೋಜನೆಯ ಫಲಾನುಭವಿಗಳು 2023ರ ಜೂನ್ 15ರಿಂದ ಜುಲೈ 15ರ ವರೆಗೆ ಅರ್ಜಿ ಸಲ್ಲಿಸಬೇಕು. ನಂತರ ಜುಲೈ 15ರಿಂದ ಫಲಾನುಭವಿಗಳ ಆಯ್ಕೆ ಮಾಡಲಾಗುತ್ತದೆ. ಆಯ್ಕೆಗೊಂಡ ಫಲಾನುಭವಿಗಳಿಗೆ ಆಗಸ್ಟ್ 15ರಂದು ಅವರ ಬ್ಯಾಂಕ್ ಖಾತೆಗಳಿಗೆ ಹಣವನ್ನು ವಗಾವಣೆ ಮಾಡಲಾಗುತ್ತದೆ.