ಸರ್ಕಾರಿ ಬಸ್ ಕಂಡಕ್ಟರ್ ಆಗಲಿದ್ದಾರೆ ಸಿಎಂ ಸಿದ್ದು!

55
firstsuddi

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳ ಪೈಕಿ ಮೊಟ್ಟಮೊದಲ ಯೋಜನೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ‘ಶಕ್ತಿ’ಯೋಜನೆಗೆ ಜೂನ್ 11ರಂದು ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ. ಕಾಂಗ್ರೆಸ್ ಗ್ಯಾರಂಟಿಗಳಿಗೆ ಇದೀಗ ವಿಭಿನ್ನವಾಗಿ ಚಾಲನೆ ನೀಡಲು ಸಿಎಂ ಸಿದ್ದರಾಮಯ್ಯ ಸ್ವತಃ ಬಸ್‌ನ ಕಂಡಕ್ಟರ್ ಆಗಲಿದ್ದಾರೆ.

ಮೆಜೆಸ್ಟಿಕ್‌ನಿಂದ ವಿಧಾನಸೌಧ ಮಾರ್ಗದ ಬಿಎಂಟಿಸಿ ಬಸ್‌ನಲ್ಲೇ ಸಿದ್ದರಾಮಯ್ಯ ಕಂಡಕ್ಟರ್ ಆಗಲಿದ್ದಾರೆ. ರೂಟ್ ನಂ.43 ಬಸ್‌ನಲ್ಲಿ ಕಂಡಕ್ಟರ್ ರೀತಿ ಮಹಿಳೆಯರಿಗೆ ಉಚಿತ ಟಿಕೆಟ್ ವಿತರಿಸಲಿದ್ದಾರೆ. ನಂತರ ವಿಧಾನಸೌಧದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಶಕ್ತಿ ಯೋಜನೆಗೆ ಸಿಎಂ ಚಾಲನೆ ನೀಡಲಿದ್ದಾರೆ. ಅಂದೇ ಜಿಲ್ಲೆಗಳಲ್ಲಿ ಸಚಿವರಿಂದ ಏಕಕಾಲದಲ್ಲಿ ಯೋಜನೆಗೆ ಚಾಲನೆ ಸಿಗಲಿದೆ.

ಈ ವಿಶಿಷ್ಟ ರೀತಿಯ ಉದ್ಘಾಟನೆಯು ಕೇವಲ ಶಕ್ತಿ ಯೋಜನೆಗೆ ಸೀಮಿತವಲ್ಲ. ಉಳಿದ ನಾಲ್ಕು ಯೋಜನೆಗಳನ್ನು ಕೂಡ ವಿಶಿಷ್ಟವಾಗಿ ಉದ್ಘಾಟಿಸುವ ಚಿಂತನೆಗಳು ನಡೆದಿವೆ. ಎಲ್ಲಕ್ಕಿಂತ ಮುಖ್ಯವಾಗಿ ಈ ಕಾರ್ಯಕ್ರಮಗಳು ಕೇವಲ ರಾಜ್ಯ ರಾಜಧಾನಿಗೆ ಸೀಮಿತವಾಗಬಾರದು ಎಂಬ ಕಾರಣಕ್ಕೆ ರಾಜ್ಯದ ಐದೂ ವಿಭಾಗೀಯ ಕೇಂದ್ರಗಳಲ್ಲಿ ಉದ್ಘಾಟನಾ ಕಾರ್ಯಕ್ರಮವನ್ನು ಆಯೋಜಿಸಲು ತೀರ್ಮಾನಿಸಲಾಗಿದೆ.