ನವದೆಹಲಿ: ಹೊಂದಾಣಿಕೆ ರಾಜಕಾರಣ ಮಾಡಿಕೊಳ್ಳದಿದ್ದರೆ ಇವತ್ತು ಬಿಜೆಪಿ ಪಕ್ಷ ಅಧಿಕಾರ ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಸ್ವ ಪಕ್ಷದ ನಾಯಕರ ವಿರುದ್ಧವೇ ಸಿಟಿ ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮಲ್ಲೂ ರಾಜಿ ರಾಜಕಾರಣ ಮಾಡಿ ತಪ್ಪು ಮಾಡಿದ್ದಾರೆ. ಕೆಲವರ ರಾಜಿ ರಾಜಕಾರಣದಿಂದ ಬಿಜೆಪಿ ಪಕ್ಷ ಅಧಿಕಾರ ಕಳೆದುಕೊಂಡಿತು. ಹೊಂದಾಣಿ ರಾಜಕಾರಣದಿಂದಲೇ ಬಿಜೆಪಿ ಸೋತಿದೆ ಎಂದು ಹೇಳಿದ್ದಾರೆ.
ಸೂಲಿಬೆಲೆ ಬೆಂಬಲಿಗರು ತುಂಬಾ ಜನರಿದ್ದಾರೆ. ಕಾಂಗ್ರೆಸ್ನವರು ದ್ವೇಷ, ಮತ್ಸರ ಹೊರ ಹಾಕುತ್ತಿದ್ದಾರೆ. ಅವರ ಅಧಿಕಾರದ ಮದವನ್ನು ಜನರು ಇಳಿಸುತ್ತಾರೆ ಎಂದರು.
ಪಠ್ಯದಿಂದ ಹೆಗಡೆವಾರು ಪಾಠ ತೆಗೆಯಲು ಕಾಂಗ್ರೆಸ್ ನಿರ್ಧಾರ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಹೆಗಡೆವಾರು ಅವರನ್ನು ಪಠ್ಯದಿಂದ ಹೊರಹಾಕಬಹುದು, ಹೃದಯದಿಂದ ಹೊರಹಾಕಲು ಸಾಧ್ಯವಿಲ್ಲ. ಅವರು ಅಧಿಕಾರದಲ್ಲಿ ಇದ್ದಾರೆ, ಏನು ಬೇಕಾದರೂ ಮಾಡಬಹುದು. ಆದರೆ ಅವರ ಸಿದ್ಧಾಂತ ಜನರ ಮನಸ್ಸಿನಲ್ಲಿದೆ. ಅದನ್ನು ತೆಗೆದು ಹಾಕಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.
ನೆಹರು, ಇಂದಿರಾ ಇದನ್ನು ಮಾಡಲು ಹೋಗಿ ಸೋತಿದ್ದಾರೆ. ಕಾರ್ಲ್ ಮಾರ್ಕ್ಸ್ ಪಠ್ಯ ಓದಬಹುದು, ಆರ್ಎಸ್ಎಸ್ ನಾಯಕರದ್ದು ಬೇಡವೇ? ಇವರ ನೆರವು ಇಲ್ಲದೆ ಸಂಘದ ಶಾಖೆಯ ಮೂಲಕವೇ ವಿಚಾರ ಬೆಳೆಯಲಿದೆ. ಸುಳ್ಳು ಮತ್ತು ಕಾಂಗ್ರೆಸ್ ನಾಣ್ಯದ ಎರಡು ಮುಖಗಳು. ಕಾಂಗ್ರೆಸ್ ನಾಯಕರು ಕುರ್ಚಿಗೆ ಅಂಗಲಾಚಿದ್ದರು. ಕಾಂಗ್ರೆಸ್ನವರನ್ನು ಯಾಕೆ ಅಂಡಮಾನ್ ಜೈಲಿಗೆ ಹಾಕಲಿಲ್ಲ ಎಂದು ಪ್ರಶ್ನಿಸಿದರು.
ಅತ್ತೆ ಆಸ್ತಿಯನ್ನು ಅಳಿಯ ದಾನ ಮಾಡಿದಂತೆ ಸದ್ದಿಲ್ಲದೆ ವಿದ್ಯುತ್ ಬಿಲ್ ಏರಿಸುತ್ತಿದ್ದಾರೆ. ಹಾಲಿನ ದರವನ್ನೂ ಏರಿಸುತ್ತಿದ್ದಾರೆ. ಕೆಕೆಆರ್ಡಿಬಿ ಅಕ್ರಮ ಆಗಿದ್ದರೆ ಕ್ರಮ ತೆಗೆದುಕೊಳ್ಳಿ, ಅರ್ಕಾವತಿ ಹಣವನ್ನು ತನಿಖೆ ಮಾಡಿ, 8,000 ಕೋಟಿ ನಷ್ಟದ ಬಗ್ಗೆಯೂ ತನಿಖೆ ಮಾಡಲಿ, ತೆರಿಗೆ ಕಟ್ಟುವವರ ಮೇಲೆ ಯಾಕೆ ಬರೆ ಹಾಕುತ್ತೀರಿ? ಸೋಲಾರ್ ಪವರ್ ಪ್ಲಾಂಟ್ನಲ್ಲಿರುವ ಅಕ್ರಮದ ಬಗ್ಗೆಯೂ ತನಿಖೆ ನಡೆಯಲಿ. ಇದರ ಹಿಂದೆ ಯಾರಿದ್ದಾರೆ ಎನ್ನುವುದು ಗೊತ್ತಿಲ್ವಾ? ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಕ್ಕೆ ಭಯವೇ ಎಂದು ಸಿಟಿ ರವಿ ಕೇಳಿದ್ದಾರೆ.










