ಮೆಟ್ಟಿಲುಗಳಿಂದ ಕೆಳಗೆ ಬಿದ್ದು ಕೊರಿಯಾದ ಖ್ಯಾತ ನಟಿ ಪಾರ್ಕ್ ಸೂ ಯನ್ ನಿಧನ…

58
firstsuddi

ಕೊರಿಯನ್ ಚಿತ್ರೋದ್ಯಮದ ಜನಪ್ರಿಯ ನಟಿ ಪಾರ್ಕ್ ಸೂ ಯನ್ ಅವರು ಮೆಟ್ಟಿಲುಗಳಿಂದ ಕೆಳಗೆ ಬಿದ್ದು ನಿಧನರಾಗಿದ್ದಾರೆ.
ಖ್ಯಾತ ನಟಿಯ ಸಾವಿನ ಬಗ್ಗೆ ಕೊರಿಯಾದ ಮಾಧ್ಯಮಗಳು ವರದಿ ಮಾಡಿವೆ.

29 ವರ್ಷದ ನಟಿ ಜೆಜು ದ್ವೀಪದಲ್ಲಿ ಪ್ರದರ್ಶನ ನೀಡಲು ಸಜ್ಜಾಗಿದ್ದರು. ಆದರೆ ಕಾರ್ಯಕ್ರಮಕ್ಕೂ ಮೊದಲು ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ. ಮೆಟ್ಟಿಲುಗಳಿಂದ ಆಯಾ ತಪ್ಪಿ ಬಿದ್ದಾಗ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದು ಬದುಕಿಸಲು ಪ್ರಯತ್ನಿಸಲಾಯಿತು. ಆದರೆ ಆಕೆಯ ಬ್ರೈನ್ ಡೆಡ್ ಎಂದು ವೈದ್ಯರು ಘೋಷಿಸುತ್ತಿದ್ದಂತೆಯೇ ಆಕೆಯ ಅಂಗಾಂಗಗಳನ್ನು ದಾನ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.

ಪಾರ್ಕ್ ಸೂ ಯನ್ ತಾಯಿ, ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದು, ‘ಆಕೆಯ ಬ್ರೈನ್ ಡೆಡ್ ಆಗಿದೆ. ಆದರೆ ಆಕೆಯ ಹೃದಯ ಬಡಿತ ಇನ್ನೂ ಇದೆ. ಹಾಗಾಗಿ ಆಕೆಯ ಅಂಗಾಂಗಗಳು ಅಗತ್ಯ ಇರುವವರಿಗೆ ಉಪಯೋಗಕ್ಕೆ ಬರಲಿ. ಈ ಮೂಲಕ ನನ್ನ ಮಗಳು ಕೂಡ ಜೀವಂತವಾಗಿ ಇರುತ್ತಾಳೆ ಎನ್ನುವ ಸಮಾಧಾನ ನಮಗೂ ಇರಲಿದೆ’ ಎಂದಿದ್ದಾರೆ.

ನಟಿ ಪಾರ್ಕ್ ಸೂ ಯನ್ ಅವರು 1994ರಲ್ಲಿ ಜನಿಸಿದರು. 2018 ರಲ್ಲಿ ಇಲ್ ಟೆನೋರ್ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದರು. ನಂತರ ಅವರು ದಿ ಸೆಲ್ಲರ್ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದರು. 

ನಿನ್ನೆ ಆಕೆಯ ಅಂತಿಮ ಸಂಸ್ಕಾರ ನಡೆದಿದ್ದು, ಅಗಲಿದ ನಟಿಗೆ ಹಲವರು ಕಂಬನಿ ಮಿಡಿದಿದ್ದಾರೆ. ಇಂದು ನಟಿ ಗೌರವಾರ್ಥ ಮೆರವಣಿಗೆ ಕೂಡ ನಡೆದಿದೆ. ಪಾರ್ಕ್, ಅತೀ ಸಣ್ಣ ವಯಸ್ಸಿನಲ್ಲೇ ದುರಂತ ಅಂತ್ಯ ಕಂಡಿದ್ದಾರೆ.