ವಿದ್ಯಾರ್ಥಿನಿಯ ಅಭಿನಂದನಾ ಪತ್ರಕ್ಕೆ ಮರಳಿ ಪತ್ರ ಬರೆದ ಸಿಎಂ ಸಿದ್ದರಾಮಯ್ಯ.

79
firstsuddi

ಕೊಪ್ಪಳ: ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಸಿದ್ದರಾಮಯ್ಯನವರಿಗೆ ಪತ್ರ ಬರೆದು ಅಭಿನಂದನೆ ಸಲ್ಲಿಸಿದ್ದ ವಿದ್ಯಾರ್ಥಿನಿಗೆ ಸಿಎಂ ಸಿದ್ದರಾಮಯ್ಯನವರು ಮರಳಿ ಪತ್ರ ಬರೆದು ತಮ್ಮ ಆನಂದವನ್ನು ವ್ಯಕ್ತಪಡಿಸಿದ್ದಾರೆ.

ಕೊಪ್ಪಳದ ಮಾಸ್ತಿ ಪಬ್ಲಿಕ್ ಸ್ಕೂಲ್‌ನ 8ನೇ ತರಗತಿಯ ಶ್ರೆಯಾಂಕ ವಿ.ಮೆಣಸಗಿ ಎಂಬ ವಿದ್ಯಾರ್ಥಿನಿ ಸಿಎಂ ಸಿದ್ದರಾಮಯ್ಯನವರಿಗೆ ಅಭಿನಂದನಾ ಪತ್ರ ಬರೆದಿದ್ದರು.

ಪತ್ರದ ಮುಖೇನ ವಿದ್ಯಾರ್ಥಿನಿ ಸಿದ್ದರಾಮಯ್ಯ 2013ರ ಅವಧಿಯಲ್ಲಿ ಸಿಎಂ ಆಗಿದ್ದಾಗ ಮಾಡಿದ ಕಾರ್ಯಗಳಾದ ಅನ್ನಭಾಗ್ಯ, ಶೂ ಭಾಗ್ಯ, ಕೃಷಿಭಾಗ್ಯ, ಕ್ಷೀರ ಭಾಗ್ಯ ಸೇರಿದಂತೆ ಹಲವು ಜನಪರ ಕಾರ್ಯಗಳನ್ನು ಪ್ರಸ್ತಾಪಿಸಿ, ನೀವು ಬಡವರು, ದೀನ ದಲಿತರ ಪರವಾಗಿರುವ ನಾಯಕ. ನೀವು ಕಳೆದ ಬಾರಿಯಂತೆ ಈ ಬಾರಿಯೂ ಉತ್ತಮ ಆಡಳಿತ ನೀಡಬೇಕು ಎಂದು ಅಭಿಲಾಷೆ ವ್ಯಕ್ತಪಡಿಸಿದ್ದಳು.

ಸಾಮಾಜಿಕ ಕಳಕಳಿಯೊಂದಿಗೆ ಬರೆದಿರುವ ಈ ಪತ್ರವನ್ನು ಓದಿರುವ ಸಿದ್ದರಾಮಯ್ಯ, ಸಂತಸಗೊಂಡು ವಿದ್ಯಾರ್ಥಿನಿ ಶ್ರೇಯಾಂಕ ವಿ. ಮೆಣಸಗಿಗೆ ಮರಳಿ ಪತ್ರ ಬರೆದಿದ್ದಾರೆ.

ಪ್ರೀತಿಯ ಶ್ರೇಯಾಂಕ, ತಾವು ಬರೆದ ಅಭಿನಂದನಾ ಪತ್ರ ತಲುಪಿದೆ. 8ನೇ ತರಗತಿ ಓದುತ್ತಿದ್ದು, ನಿನಗಿರುವ ಸಾಮಾಜಿಕ ಕಳಕಳಿ ಮೆಚ್ಚುವಂತಹದ್ದು. ಈ ಎಳೆಯ ವಯಸ್ಸಿನಲ್ಲೇ ನಿನಗೆ ಬಡವರು, ದೀನ-ದಲಿತರು, ರೈತರ ಬಗೆಗಿನ ಕಾಳಜಿ ಬೆರಗು ಮೂಡಿಸುವಂತಹದ್ದು. ಜೀವನದಲ್ಲಿ ಶ್ರದ್ಧೆ ಮತ್ತು ಪರಿಶ್ರಮದಿಂದ ವಿದ್ಯೆ ಕಲಿತು, ಸಮಾಜಕ್ಕೆ ಉತ್ತಮ ಕೊಡುಗೆ ನೀಡುವ ಮೂಲಕ ಇತರರಿಗೆ ಮಾದರಿಯಾಗು ಎಂದು ಹಾರೈಸಿ ಮರಳಿ ಪತ್ರ ಬರೆದಿದ್ದಾರೆ.