ನವದೆಹಲಿ: ವಂದೇ ಭಾರತ್ ರೈಲು ಸೇರಿದಂತೆ ಹಲವು ಎಸಿ ರೈಲುಗಳ ದರವನ್ನು ಲಭ್ಯತೆಗೆ ಅನುಗುಣವಾಗಿ ಶೇಕಡಾ 25 ರಷ್ಟು ಕಡಿತಗೊಳಿಸಲಾಗುವುದು ಎಂದು ರೈಲ್ವೆ ಮಂಡಳಿಯ ಆದೇಶ ಹೊರಡಿಸಿದೆ.
ರೈಲುಗಳಲ್ಲಿ ಸೌಕರ್ಯಗಳ ಬಳಕೆಯನ್ನು ಉತ್ತಮಗೊಳಿಸುವ ಉದ್ದೇಶದಿಂದ ಈ ಯೋಜನೆಯನ್ನು ಪರಿಚಯಿಸಲು ವಲಯ ರೈಲ್ವೆಗಳಿಗೆ ಅಧಿಕಾರವನ್ನು ನಿಯೋಜಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಅಂತಹ ರೈಲುಗಳ ಮೇಲಿನ ರಿಯಾಯಿತಿಯು ತಕ್ಷಣವೇ ಜಾರಿಗೆ ಬರುವಂತೆ ಅನ್ವಯಿಸುತ್ತದೆ. ಆದರೆ ಈಗಾಗಲೇ ತಮ್ಮ ಟಿಕೆಟ್‌ಗಳನ್ನು ಕಾಯ್ದಿರಿಸಿದ ಪ್ರಯಾಣಿಕರು ಯಾವುದೇ ಮರುಪಾವತಿಯನ್ನು ಪಡೆಯುವುದಿಲ್ಲ.
“ಈ ಯೋಜನೆಯು ಅನುಭೂತಿ ಮತ್ತು ವಿಸ್ಟಾಡೋಮ್ ಕೋಚ್‌ಗಳು ಸೇರಿದಂತೆ ಎಸಿ ಆಸನ ಸೌಕರ್ಯಗಳನ್ನು ಹೊಂದಿರುವ ಎಲ್ಲಾ ರೈಲುಗಳ ಎಸಿ ಚೇರ್ ಕಾರ್ ಮತ್ತು ಎಕ್ಸಿಕ್ಯೂಟಿವ್ ಕ್ಲಾಸ್ ಗಳಿಗೆ ಅನ್ವಯಿಸುತ್ತದೆ” ಎಂದು ರೈಲ್ವೆ ಮಂಡಳಿಯ ಆದೇಶದಲ್ಲಿ ತಿಳಿಸಿದೆ.
“ರಿಯಾಯಿತಿಯೂ ಮೂಲ ದರದಲ್ಲಿ ಗರಿಷ್ಠ ಶೇ. 25 ವರೆಗೆ ಇರುತ್ತದೆ. ರಿಸರ್ವೆಷನ್ ಶುಲ್ಕ, ಸೂಪರ್ ಫಾಸ್ಟ್ ಸರ್‌ಚಾರ್ಜ್, ಜಿಎಸ್‍ಟಿ, ಇತ್ಯಾದಿಗಳಂತಹ ಇತರ ಶುಲ್ಕಗಳನ್ನು ಪ್ರತ್ಯೇಕವಾಗಿ ವಿಧಿಸಲಾಗುತ್ತದೆ.
ಆಕ್ಯುಪೆನ್ಸೀ ಶೇಕಡಾ 50 ಕ್ಕಿಂತ ಕಡಿಮೆಯಿದ್ದರೆ ಯಾವುದೇ ರೈಲು ಅಥವಾ ಎಲ್ಲಾ ವರ್ಗಗಳಲ್ಲಿ ರಿಯಾಯಿತಿಯನ್ನು ಒದಗಿಸಬಹುದು ಎಂದು ರೈಲ್ವೆ ಮಂಡಳಿ ಸ್ಪಷ್ಟವಾಗಿ ಹೇಳಿದೆ.










