ಎರಡು ಗುಂಪುಗಳ ನಡುವೆ ಗಲಾಟೆ- ಯುವಾ ಬ್ರಿಗೇಡ್ ಕಾರ್ಯಕರ್ತನ ಹತ್ಯೆ…

51
firstsuddi

ಮೈಸೂರು: ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ಯುವಾ ಬ್ರಿಗೇಡ್ ಕಾರ್ಯಕರ್ತನನ್ನು ಹತ್ಯೆ ಮಾಡಿರುವ ಘಟನೆ ನಿನ್ನೆ ತಡರಾತ್ರಿ ಜಿಲ್ಲೆಯ ಟಿ.ನರಸೀಪುರ ಪಟ್ಟಣದ ಶ್ರೀರಾಂಪುರ ಕಾಲೋನಿಯಲ್ಲಿ ನಡೆದಿದೆ.

ವೇಣುಗೋಪಾಲ್ ನಾಯಕ್ (32) ಕೊಲೆಯಾದ ಯುವಾ ಬ್ರಿಗೇಡ್ ಕಾರ್ಯಕರ್ತ. ನಿನ್ನೆ ಹನುಮ ಜಯಂತಿ ಆಚರಣೆ ವೇಳೆ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದಿದ್ದು, ಅದು ತಾರಕಕ್ಕೆ ಏರಿ ಗಲಾಟೆ ನಡೆದು ಕೊಲೆಯಲ್ಲಿ ಅಂತ್ಯವಾಗಿದೆ.

ಘಟನಾ ಸ್ಥಳಕ್ಕೆ ಡಿವೈಎಸ್​​ಪಿ ಗೋವಿಂದರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಟಿ.ನರಸೀಪುರ ಠಾಣೆ ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.

ಟಿ.ನರಸೀಪುರ ಸರ್ಕಾರಿ ಆಸ್ಪತ್ರೆಗೆ ಮೃತದೇಹ ರವಾನೆ ಮಾಡಲಾಗಿದ್ದು, ಆಸ್ಪತ್ರೆ ಮುಂದೆ ನೂರಾರು ಕಾರ್ಯಕರ್ತರು ಜಮಾಯಿಸಿದ್ದಾರೆ. ಅಲ್ಲದೇ ಆಸ್ಪತ್ರೆಗೆ ಚಿಂತಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಭೇಟಿ ನೀಡಿ ಮೃತ ಯುವಕನ ಅಂತಿಮ ದರ್ಶನ ಪಡೆದರು. ಬಳಿಕ ಮೃತ ಯುವಕನ ಕುಟುಂಬಕ್ಕೆ ಸಾಂತ್ವನ ಹೇಳಿದರು. ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುವಂತೆ ಒತ್ತಾಯಿಸಿದರು.

ಘಟನಾ ಸಂಬಂಧ ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.