ಶಂಕಿತ ಉಗ್ರರ ಮನೆಯಲ್ಲಿ 4 ಗ್ರೆನೇಡ್‌ಗಳನ್ನು ಪತ್ತೆಹಚ್ಚಿದ ಸಿಸಿಬಿ ಅಧಿಕಾರಿಗಳು…

33
firstsuddi

ಬೆಂಗಳೂರು: ನಗರದಲ್ಲಿ ಭಯಾನಕ ಸ್ಫೋಟ ನಡೆಸಲು ಸ್ಕೆಚ್ ಹಾಕಿದ್ದ ಐವರು ಶಂಕಿತ ಉಗ್ರರ ತನಿಖೆ ಮತ್ತಷ್ಟು ಚುರುಕುಗೊಂಡಿದ್ದು, 4 ಸಜೀವ ಗ್ರೆನೇಡ್‌ಗಳನ್ನು ಸಿಸಿಬಿ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.

ಬೆಂಗಳೂರಿನ ಕೋಡಿಗೆಹಳ್ಳಿಯ ಜುನೈದ್ ಮನೆಯೊಂದರಲ್ಲಿ ಅಡಗಿಸಿಟ್ಟಿದ್ದ ಗ್ರೆನೇಡ್‌ಗಳನ್ನು ಸಿಸಿಬಿ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಪೌಡರ್ ರೂಪದ ಕೆಮಿಕಲ್‌ನಿಂದ ಸ್ಫೋಟವಾಗದಂತೆ ಅಡಗಿಸಿಟ್ಟಿದ್ದ ನಾಲ್ಕೈದು ಗ್ರೆನೇಡ್‌ಗಳನ್ನು ಸಿಸಿಬಿ ಅಧಿಕಾರಿಗಳು ಪತ್ತೆ ಮಾಡಿ, ಸೀಜ್ ಮಾಡಿದ್ದಾರೆ.

ಬೆಂಗಳೂರಿನಲ್ಲಿ ದುಷ್ಕೃತ್ಯ ಎಸಗಲು ತಲೆ ಮರೆಸಿಕೊಂಡಿರುವ ಎ-2 ಆರೋಪಿ ಜುನೈದ್, ಎ-5 ಬೇರೋಬ್ಬ ವ್ಯಕ್ತಿಯ ಮೂಲಕ ಎ-5 ಆರೋಪಿ ತಬ್ರೇಜ್‌ಗೆ 4 ಹ್ಯಾಂಡ್ ಗ್ರೆನೇಡ್‌ಗಳನ್ನು ತಲುಪಿಸಿದ್ದಾನೆ. ಅವುಗಳನ್ನು ಕೋಡಿಗೆಹಳ್ಳಿಯ ಮನೆಯೊಂದರಲ್ಲಿ ಅಡಗಿಸಿಟ್ಟಿದ್ದರು. ಪೌಡರ್ ರೂಪದ ಕೆಮಿಕಲ್ ಬಳಸಿ ಪೆಟ್ಟಿಗೆಯೊಂದರಲ್ಲಿ ಅಡಗಿಸಿಟ್ಟಿದ್ದರು. ಈ ಬಗ್ಗೆ ಮಾಹಿತಿ ಪಡೆದ ನಂತರ ತನಿಖಾಧಿಕಾರಿಗಳು ಬಾಂಬ್ ನಿಷ್ಕ್ರಿಯ ದಳ ಮತ್ತು ಎಫ್‍ಎಸ್‍ಎಲ್ ಅಧಿಕಾರಿಗಳ ಜೊತೆಯಲ್ಲಿ ಕಾರ್ಯಾಚರಣೆ ನಡೆಸಿ ಸಜೀವ ಗ್ರೆನೇಡ್‌ಗಳನ್ನು ಪತ್ತೆಮಾಡಿ ವಶಪಡಿಸಿಕೊಳ್ಳಲಾಗಿದೆ. ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ಮುಂದುವರಿದಿದೆ.

ಇನ್ನು ಈ ಬಗ್ಗೆ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಡಾ.ಎಸ್.ಡಿ. ಶರಣಪ್ಪ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ಐವರು ಆರೋಪಿಗಳನ್ನು ಕೋರ್ಟ್​ಗೆ ಹಾಜರುಪಡಿಸಿ ವಶಕ್ಕೆ ಪಡೆದಿದ್ದೇವೆ. 5ನೇ ಆರೋಪಿ ತಲೆಮರೆಸಿಕೊಂಡಿರುವ ಆರೋಪಿ ಜತೆ ಸಂಪರ್ಕದಲ್ಲಿದ್ದ. ಪ್ರಮುಖ ಆರೋಪಿ ನೀಡಿದ್ದ ಗ್ರೆನೇಡ್ ಮನೆಯಲ್ಲಿ ಸುರಕ್ಷಿತವಾಗಿಟ್ಟಿದ್ದ. ನಮ್ಮ ತಂಡ ಮನೆಗೆ ತೆರಳಿ ಪರಿಶೀಲಿಸಿದ ವೇಳೆ 4 ಗ್ರೆನೇಡ್ ಸಿಕ್ಕಿದೆ. ಆರೋಪಿ ನೀಡಿದ ಮಾಹಿತಿ ಮೇರೆಗೆ 4 ಜೀವಂತ ಗ್ರೆನೇಡ್ ಸಿಕ್ಕಿದೆ. 5ನೇ ಆರೋಪಿ ಮನೆಯ ಬೀರುವಿನಲ್ಲಿ ಗ್ರೆನೇಡ್‌ಗಳನ್ನು ಬಟ್ಟೆಯಲ್ಲಿ ಸುತ್ತಿ ಸುರಕ್ಷಿತವಾಗಿಟ್ಟಿದ್ದ. ಯಾವುದೇ ಕ್ಷಣದಲ್ಲಿ ಬೇಕಾದರೂ ಬಳಸಬಹುದಾದ 4 ಗ್ರೆನೇಡ್ ಜಪ್ತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.