ಬೆಂಗಳೂರು: ಟೊಮೆಟೊ ತುಂಬಿದ್ದ ಬೊಲೆರೋ ವಾಹನ ಕಳ್ಳತನ ಮಾಡಿದ್ದ ದಂಪತಿಯನ್ನು ಆರ್ಎಂಸಿ ಯಾರ್ಡ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ದಂಪತಿಯನ್ನು ಭಾಸ್ಕರ್ ಮತ್ತು ಆತನ ಪತ್ನಿ ಸಿಂಧೂಜಾ ಎಂದು ಗುರುತಿಸಲಾಗಿದೆ. ತಲೆಮರೆಸಿಕೊಂಡ ಇನ್ನೂ ಮೂವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಜುಲೈ 8 ಶನಿವಾರದಂದು ರೈತರೊಬ್ಬರು ಅಂದಾಜು 3 ಲಕ್ಷ ಮೌಲ್ಯದ ಟೊಮೆಟೊವನ್ನು ಬೊಲೆರೋದಲ್ಲಿ ತುಂಬಿಕೊಂಡು ಹಿರಿಯೂರಿನಿಂದ ಕೋಲಾರಕ್ಕೆ ಸಾಗಿಸುತ್ತಿದ್ದರು. ಇದನ್ನು ಗಮನಿಸಿದ ಮೂವರು ಅಪರಿಚಿತರು ಕಾರಿನಲ್ಲಿ ಬೊಲೆರೋ ವಾಹನವನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ. ಬಳಿಕ ಆರ್ಎಂಸಿ ಯಾರ್ಡ್ ಠಾಣೆಯ ವ್ಯಾಪ್ತಿಯಲ್ಲಿ ಅಡ್ಡಗಟ್ಟಿ, ನಿಮ್ಮ ವಾಹನದಿಂದ ನಮ್ಮ ಕಾರಿಗೆ ಟಚ್ ಮಾಡಿದ್ದೀರಿ ಎಂದು ನಾಟಕವಾಡಿ, ರೈತ ಮತ್ತು ಬೊಲೆರೋ ಚಾಲಕನಿಗೆ ಹಲ್ಲೆ ಮಾಡಿ, ಬೊಲೆರೋವನ್ನು ತೆಗೆದುಕೊಂಡು ಎಸ್ಕೇಪ್ ಆಗಿದ್ದರು. ಈ ಕುರಿತು ರೈತರು ಠಾಣೆಗೆ ದೂರು ದಾಖಲಿಸಿದ್ದರು.
ಇನ್ನು ಟೊಮೆಟೊ ತುಂಬಿದ ಬೊಲೆರೋ ಕಳ್ಳತನ ಮಾಡಿದ ಖದೀಮರು, ತಮ್ಮ ನಿವಾಸದಲ್ಲಿ ಕೂತು ಪ್ಲ್ಯಾನ್ ಮಾಡಿ ಬಳಿಕ ಚೆನ್ನೈ ಮಾರುಕಟ್ಟೆಗೆ ಹೋಗಿ ಟೊಮೆಟೊವನ್ನು ಮಾರಾಟ ಮಾಡಿದ್ದಾರೆ. ನಂತರ ಖಾಲಿ ವಾಹನವನ್ನು ತಂದು ನಿಲ್ಲಿಸಿ ಪರಾರಿಯಾಗಿದ್ದರು.










