ಬೀಜಿಂಗ್: ಜಿಮ್ನ ಮೇಲ್ಛಾವಣಿ ಕುಸಿದು ಬಿದ್ದು 10 ಮಂದಿ ದಾರುಣವಾಗಿ ಮೃತಪಟ್ಟಿರುವ ಘಟನೆ ಚೀನಾದಲ್ಲಿ ನಡೆದಿದೆ.
ಇಂದು ಮುಂಜಾನೆ 5:30ರ ಸುಮಾರಿಗೆ ಈ ಘಟನೆ ನಡೆದಿದ್ದು, 14 ಮಂದಿಯನ್ನು ಅವಶೇಷಗಳಡಿಯಿಂದ ಹೊರತೆಗೆಯಲಾಗಿದೆ. ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಆರು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ನಡೆದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಸುಮಾರು 160 ಅಗ್ನಿಶಾಮಕ ಸಿಬ್ಬಂದಿ ಮತ್ತು 39 ಅಗ್ನಿಶಾಮಕ ಟ್ರಕ್‌ಗಳನ್ನು ಒಳಗೊಂಡ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ.
ಭಾರಿ ಮಳೆಯಿಂದಾಗಿ ಜಿಮ್ನ ಮೇಲ್ಛಾವಣಿ ಕುಸಿದಿದೆ, ನಿರ್ಮಾಣ ಕಂಪನಿಯ ಉಸ್ತುವಾರಿ ವಹಿಸಿರುವವರನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.










