ಜೈಪುರ: ವಿವಾಹಿತ ಮಹಿಳೆಯೊಬ್ಬಳು ತನ್ನ ಫೇಸ್‍ಬುಕ್ ಗೆಳೆಯನನ್ನು ಭೇಟಿಯಾಗಲು ಭಾರತದಿಂದ ಪಾಕಿಸ್ತಾನಕ್ಕೆ ತೆರಳಿದ ಘಟನೆ ನಡೆದಿದೆ.
ರಾಜಸ್ಥಾನದ ಬಿವಾಡಿ ಜಿಲ್ಲೆಯ ವಿವಾಹಿತೆ ತನ್ನ ಬಾಯ್‍ಫ್ರೆಂಡ್ ಭೇಟಿಯಾಗಲು ಭಾರತದ ಗಡಿ ದಾಟಿ ಪಾಕಿಸ್ತಾನದ ವಾಯುವ್ಯ ಖೈಬರ್ ಪಖ್ತುಂಕ್ವಾ ಪ್ರಾಂತ್ಯಕ್ಕೆ ಪ್ರಯಾಣ ಬೆಳೆಸುವ ಮೂಲಕ ಎಲ್ಲರ ಅಚ್ಚರಿಗೆ ಕಾರಣವಾಗಿದ್ದಾಳೆ.
ಮಹಿಳೆಯನ್ನು ಅಂಜು ಎಂದು ಗುರುತಿಸಲಾಗಿದೆ. ಈಕೆಯ ಪತಿ ಅರವಿಂದ್ ಈ ಬಗ್ಗೆ ಪ್ರತಿಕ್ರಿಯಿಸಿ ಕೆಲ ದಿನಗಳ ಹಿಂದೆ ಅಂಜು ಜೈಪುರಕ್ಕೆ ತೆರಳಿದ್ದಾಳೆ. ಆದರೆ ಆಕೆ ಗಡಿ ದಾಟಿ ಹೋಗಿದ್ದಾಳೆ ಎಂಬುದು ಮಾಧ್ಯಮಗಳ ಮೂಲಕ ನಿನ್ನೆ ನನಗೆ ತಿಳಿಯಿತು ಎಂದರು.
ನಾನು ಆಕೆಯ ಜೊತೆ ವಾಟ್ಸಾಪ್ ಸಂಪರ್ಕದಲ್ಲಿದ್ದೆ. ನಿನ್ನೆ ಸಂಜೆ 4 ಗಂಟೆ ಸುಮಾರಿಗೆ ಕರೆ ಮಾಡಿ ತಾನು ಲಾಹೋರ್ ನಲ್ಲಿದ್ದೇನೆ. ಎರಡು-ಮೂರು ದಿನಗಳಲ್ಲಿ ವಾಪಸ್ ಬರುವುದಾಗಿ ತಿಳಿಸಿದ್ದಳು ಎಂದು ಅರವಿಂದ್ ಹೇಳಿದರು. ಇದೇ ವೇಳೆ ಪತ್ನಿಯ ಲವ್ ಬಗ್ಗೆ ಕೇಳಿದಾಗ, ಈ ವಿಚಾರ ನನಗೆ ಗೊತ್ತಿದೆ. ನನ್ನ ಪತ್ನಿ ವಾಪಸ್ ಬಂದೇ ಬರುತ್ತಾಳೆ ಅನ್ನೋ ನಂಬಿಕೆಯಿದೆ ಎಂದು ಹೇಳಿದರು.
ಅರವಿಂದ್ ಬಿವಾಡಿಯಲ್ಲಿ ಕೆಲಸ ಮಾಡುತ್ತಿದ್ದು, ಅಂಜು ಖಾಸಗಿ ಸಂಸ್ಥೆಯೊಂದರಲ್ಲಿ ಬಯೋಡೇಟಾ ಎಂಟ್ರಿ ಆಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ದಂಪತಿ ಇಬ್ಬರು ಮಕ್ಕಳನ್ನು ಹೊಂದಿದ್ದು, ಅಂಜು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ನಂತರ ಅರವಿಂದ್ ಅವರೊಂದಿಗೆ ಮದುವೆಯಾಗಿದ್ದಾರೆ. ಅರವಿಂದ್ ಅವರು ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ಅಂಜು ಅವರ ಸಹೋದರನೊಂದಿಗೆ ಬಿವಾಡಿಯಲ್ಲಿ ಬಾಡಿಗೆ ಫ್ಲಾಟ್‍ನಲ್ಲಿ ವಾಸವಾಗಿದ್ದರು.
ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವ ನಸ್ರುಲ್ಲಾ ಮತ್ತು ಅಂಜು ಕೆಲವು ತಿಂಗಳ ಹಿಂದೆ ಫೇಸ್‍ಬುಕ್‍ನಲ್ಲಿ ಸ್ನೇಹಿತರಾದರು. ಇದೀಗ ನಿನ್ನೆ ಅಂಜು ಜೈಪುರಕ್ಕೆ ಹೋಗುವ ನೆಪದಲ್ಲಿ ಬಿವಾಡಿಯಲ್ಲಿರುವ ತನ್ನ ಮನೆಯಿಂದ ಹೊರಟಿದ್ದಳು. ನಂತರ ಆಕೆ ತನ್ನ ಫೇಸ್‍ಬುಕ್ ಸ್ನೇಹಿತ ನಸ್ರುಲ್ಲಾನನ್ನು ಭೇಟಿಯಾಗಲು ಪಾಕಿಸ್ತಾನಕ್ಕೆ ತೆರಳಿದ್ದಳು.
ಅಂಜು ಆರಂಭದಲ್ಲಿ ಪೊಲೀಸ್ ವಶದಲ್ಲಿದ್ದರು. ಆದರೆ ಆಕೆಯ ಪ್ರಯಾಣ ದಾಖಲೆಗಳನ್ನು ಪರಿಶೀಲಿಸಿದ ನಂತರ ಬಿಡುಗಡೆ ಮಾಡಲಾಯಿತು. ಅಂಜು ಅವರ ಎಲ್ಲಾ ಪ್ರಯಾಣದ ದಾಖಲೆಗಳು ಸರಿಯಾಗಿವೆ ಎಂದು ಕಂಡುಬಂದ ನಂತರ ಆಕೆಗೆ ಹೋಗಲು ಅನುಮತಿ ನೀಡಲಾಯಿತು. ಅಂಜು ಭಾರತದಿಂದ ವಾಘಾ-ಅಟ್ಟಾರಿ ಗಡಿಯ ಮೂಲಕ ಕಾನೂನುಬದ್ಧವಾಗಿ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮತ್ತು ದೇಶಕ್ಕೆ ಕೆಟ್ಟ ಹೆಸರು ತರುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಅವರಿಗೆ ಭದ್ರತೆಯನ್ನು ಒದಗಿಸಲಾಗಿದೆ ಎಂಬುದಾಗಿ ವರದಿಯಾಗಿದೆ.










