ಲಾರಿ ಚಾಲಕರು ಮತ್ತು ಮಾಲೀಕರಿಗೆ ಮನೆ ನಿರ್ಮಿಸಿ ಕೊಡುವಂತೆ ಒತ್ತಾಯ…

118
firstsuddi

ಚಿಕ್ಕಮಗಳೂರು: ಲಾರಿ ಚಾಲಕರು ಮತ್ತು ಮಾಲೀಕರಿಗೆ ಮನೆ ನಿರ್ಮಿಸಿ ಕೊಡುವಂತೆ ತಾಲೂಕು ಲಾರಿ ಮಾಲೀಕರ ಸಂಘ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.

ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರನ್ನು ಇಂದು ಭೇಟಿ ಮಾಡಿದ ಸಂಘದ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿದರು.
ಲಾರಿ ಮಾಲೀಕರಲ್ಲಿ ಬಹಳಷ್ಟು ಜನ ಕಡುಬಡವರಿದ್ದಾರೆ. ಅವರು, ವಾಸಿಸಲು ಸ್ವಂತ ಸೂರು ಇಲ್ಲದೆ, ಬಾಡಿಗೆ ಮನೆಗಳಲ್ಲಿ ಕಾಲ ಕಳೆಯುತ್ತಿದ್ದಾರೆ. ಲಾರಿ ಚಾಲಕರೂ ಸಹ ಬಡವರಾಗಿರುವುದರಿಂದ ಸ್ವಂತ ಮನೆ ಇಲ್ಲದೆ ಪರದಾಡುತ್ತಿದ್ದಾರೆ ಎಂದು ಹೇಳಿದರು.

ಈ ಹಿನ್ನೆಲೆಯಲ್ಲಿ ಲಾರಿ ಮಾಲೀಕರು ಮತ್ತು ಚಾಲಕರಿಗೆ ನಗರದಲ್ಲಿ ನಿವೇಶನ ನೀಡುವುದರ ಜೊತೆಗೆ ಮನೆ ನಿರ್ಮಿಸಿ ಕೊಡಬೇಕು ಎಂದು ಮನವಿ ಮಾಡಿದರು. ಲಾರಿಗಳನ್ನು ನಿಲ್ಲಿಸಲು ನಗರದಲ್ಲಿ ಸುಸಜ್ಜಿತವಾದ ಲಾರಿ ನಿಲ್ದಾಣವನ್ನು ನಿರ್ಮಿಸುವಂತೆ ಒತ್ತಾಯಿಸಿದರು.

ಲಾರಿ ಮಾಲೀಕರು ಮತ್ತು ಚಾಲಕರು ಲಾರಿಗಳನ್ನು ನಿಲ್ಲಿಸಲು ನಗರದಲ್ಲಿ ಸ್ಥಳವಿಲ್ಲದೆ ಪರದಾಡುತ್ತಿದ್ದಾರೆ. ಲಾರಿ ನಿಲ್ದಾಣವನ್ನು ನಿರ್ಮಿಸುವಂತೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.

ಲಾರಿ ನಿಲ್ದಾಣ ನಿರ್ಮಿಸಿ ಕೊಡಲು ಪೊಲೀಸ್ ಇಲಾಖೆಗೆ ಸೂಚಿಸಬೇಕು. ನಿಲ್ದಾಣ ನಿರ್ಮಿಸಿ ಕೊಡದಿದ್ದಲ್ಲಿ ರಸ್ತೆಬದಿ ನಿಲ್ಲಿಸುವ ಲಾರಿಗಳ ಮೇಲೆ ಮೊಕದ್ದಮೆ ದಾಖಲಿಸದಂತೆ ಆದೇಶಿಸಬೇಕು ಎಂದು ಆಗ್ರಹಿಸಿದರು.

ತಾಲೂಕು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸೋಮಾನಾಯಕ್, ಉಪಾಧ್ಯಕ್ಷ ಯೂಸೂಫ್, ಕಾರ್ಯದರ್ಶಿ ಅಯೂಬ್, ಸಂಘಟನಾ ಕಾರ್ಯದರ್ಶಿ ಸಮೀರ್, ಭಾಷಾ ಹಾಜರಿದ್ದರು.