ಕಲ್ಲಲ್ಲಿ ಹೊಡೆದು ಗೆಳೆಯನ ಹತ್ಯೆಗೈದು ಪೊಲೀಸರಿಗೆ ಶರಣಾದ ಆರೋಪಿ…

69
firstsuddi

ಬೆಂಗಳೂರು: ಹಳೇ ದ್ವೇಷದ ಹಿನ್ನೆಲೆಯಲ್ಲಿ ಯುವಕನೋರ್ವ ತನ್ನ ಗೆಳೆಯನನ್ನು ಕಲ್ಲಲ್ಲಿ ಹೊಡೆದು ಹತ್ಯೆಗೈದು ಬಳಿಕ ತಾನೇ ಬಂದು ಪೊಲೀಸರಿಗೆ ಶರಣಾಗಿರುವ ಘಟನೆ ನಗರದಲ್ಲಿ ನಡೆದಿದೆ.

ಕೆಂಗೇರಿ ಸ್ಯಾಟ್‌ಲೈಟ್‌ನ ಅರುಂಧತಿ ನಗರದ ನಿವಾಸಿ ಚೇತನ್ (25) ಕೊಲೆಯಾದ ದುರ್ದೈವಿ. ಪೊಲೀಸರಿಗೆ ಶರಣಾದ ಆರೋಪಿಯನ್ನು ಅಮಾನುಲ್ಲಾ ಎಂದು ಗುರುತಿಸಲಾಗಿದೆ. ಕೊಮ್ಮಘಟ್ಟದ ಮೈದಾನ ಸಮೀಪ ಮಂಗಳವಾರ ರಾತ್ರಿ ಮದ್ಯದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಈ ಗೆಳೆಯರ ಮಧ್ಯೆ ಉಂಟಾದ ಜಗಳವು ಕೊಲೆಯಲ್ಲಿ ಅಂತ್ಯವಾಗಿದೆ. ಚೇತನ್ ಗೆ ಕಲ್ಲಿನಿಂದ ಹೊಡೆದು ಹತ್ಯೆಗೈದು ಬಳಿಕ ರಾತ್ರಿ 11 ಗಂಟೆಗೆ ಕೆಂಗೇರಿ ಠಾಣೆಗೆ ತೆರಳಿ ಅಮಾನುಲ್ಲಾ ಶರಣಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜ್ಞಾನಭಾರತಿ ಆರ್‌ಟಿಒ ಕಚೇರಿಯಲ್ಲಿ ಮಧ್ಯವರ್ತಿಯಾಗಿದ್ದ ಅಮಾನುಲ್ಲಾ, ತನ್ನ ಕುಟುಂಬದ ಜತೆ ಸನ್ ಸಿಟಿಯಲ್ಲಿ ನೆಲೆಸಿದ್ದ. ಹಲವು ದಿನಗಳಿಂದ ಸ್ಥಳೀಯ ವಿಚಾರವಾಗಿ ಚೇತನ್ ಹಾಗೂ ಅಮಾನುಲ್ಲಾ ಮಧ್ಯೆ ಮನಸ್ತಾಪವಾಗಿತ್ತು. ಕಳೆದ ವರ್ಷ ಗಣೇಶೋತ್ಸವದ ವೇಳೆ ಇಬ್ಬರು ಗಲಾಟೆ ಸಹ ಮಾಡಿಕೊಂಡಿದ್ದರು. ಇದಾದ ಬಳಿಕ ಪರಸ್ಪರ ಕತ್ತಿ ಮಸೆಯುತ್ತಿದ್ದರು. ಕೊಮ್ಮಘಟ್ಟದ ಮೈದಾನ ಬಳಿ ಮಂಗಳವಾರ ರಾತ್ರಿ ಚೇತನ್ ಹಾಗೂ ಅಮಾನುಲ್ಲಾ ಮುಖಾಮುಖಿಯಾಗಿದ್ದಾರೆ. ಆಗ ಮದ್ಯದ ಅಮಲಿನಲ್ಲಿದ್ದ ಅವರ ಮಧ್ಯೆ ಹಳೇ ಗಲಾಟೆ ವಿಷಯ ಪ್ರಸ್ತಾಪವಾಗಿ ಜಗಳ ಶುರುವಾಗಿದೆ. ಈ ಹಂತದಲ್ಲಿ ಕೆರಳಿದ ಅಮಾನುಲ್ಲಾ, ಚೇತನ್ ಮೇಲೆ ಕಲ್ಲಿನಿಂದ ಹೊಡೆದು ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾನೆ.

ಘಟನೆ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.