ಬೆಂಗಳೂರು: ಬಿಎಂಟಿಸಿ ಬಸ್ ಹರಿದು ನಾಲ್ಕು ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ನಗರದ ಉತ್ತರಹಳ್ಳಿ ಮುಖ್ಯರಸ್ತೆಯಲ್ಲಿ ನಡೆದಿದೆ.
ಇಂಟರ್ ನ್ಯಾಶನಲ್ ಪಬ್ಲಿಲ್ ಸ್ಕೂಲ್ ಪ್ರಿ ಕೆಜಿ ವಿದ್ಯಾರ್ಥಿನಿ ಪೂರ್ವಿ ರಾವ್ ಮೃತ ದುರ್ದೈವಿ. ತಂದೆ ಪ್ರಸನ್ನ ಮಗಳು ಪೂರ್ವಿಯನ್ನು ಎಂದಿನಂತೆ ಇಂದೂ ಕೂಡ ಶಾಲೆಗೆ ಬಿಡಲು ಬೈಕ್‌ನಲ್ಲಿ ಕರೆದೊಯ್ಯುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಬಿಎಂಟಿಸಿ ಬಸ್ ಬೈಕ್‌ಗೆ ಡಿಕ್ಕಿ ಹೊಡೆದಿದ್ದು, ಡಿಕ್ಕಿ ಹೊಡೆದ ರಭಸಕ್ಕೆ ತಂದೆ ಪ್ರಸನ್ನ ಬೈಕ್‌ನ ಎಡಬದಿಗೆ ಬಿದ್ದಿದ್ದಾರೆ. ಪೂರ್ವಿ ಬಲಬದಿಗೆ ಬಿದ್ದಿದ್ದು, ಈ ವೇಳೆ ಆಕೆಯ ಮೇಲೆ ಬಿಎಂಟಿಸಿ ಬಸ್ ಹರಿದು ಬಾಲಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.
ಘಟನೆ ಕುರಿತು ಕುಮಾರಸ್ವಾಮಿ ಲೇಔಟ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಸ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.










