ಚಿಕ್ಕಮಗಳೂರು: ಮಾನಸಿಕ ಮತ್ತು ದೈಹಿಕ ಆರೋಗ್ಯ ಹಾಗೂ ಸದೃಢ ದೇಹಕ್ಕಾಗಿ ಮಕ್ಕಳು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರವೀಶ್ ಸಲಹೆ ಮಾಡಿದರು.
ಅತಿಥೇಯ ತೇಗೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಗರದ ಜಿಲ್ಲಾ ಆಟದ ಮೈದಾನದಲ್ಲಿ ಇಂದು ಏರ್ಪಡಿಸಿದ್ದ ಕಸಬಾ-2 ವಲಯ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪಠ್ಯದ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯ ಲಭಿಸುತ್ತದೆ. ಶರೀರ ಸದೃಢವಾಗುತ್ತದೆ ಎಂದು ಕಿವಿ ಮಾತು ಹೇಳಿದರು.
ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು ಸೋಲು ಗೆಲುವನ್ನು ಗಣನೆಗೆ ತೆಗೆದುಕೊಳ್ಳಬಾರದು, ಸೋಲನ್ನು ಸವಾಲಾಗಿ ಸ್ವೀಕರಿಸಬೇಕು ಎಂದರು.
ಇದಕ್ಕೂ ಮುನ್ನ ಕ್ಷೇತ್ರ ಶಿಕ್ಷಣಾಧಿಕಾರಿ ರವೀಶ್ ಅವರು ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಮೇಶ್ವರಪ್ಪ ಕ್ರೀಡಾಜ್ಯೋತಿ ಸ್ವೀಕರಿಸಿದರು.
ತೇಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧಾಗುರು ಪಂದ್ಯಾವಳಿಗೆ ಚಾಲನೆ ನೀಡಿದರು. ವಲಯ 2 ಮಟ್ಟದ 21 ಶಾಲೆಗಳ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.
ತೇಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ತಾರಾಮಣಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕ ದಿನೇಶ್, ಗ್ರಾ.ಪಂ. ಸದಸ್ಯರಾದ ಗೋಪಾಲ ರಾಜ ಅರಸ್, ಮಹೇಶ್ ರಾಜ್ ಅರಸ್, ಮೋನಾಕ್ಷಿ, ಅಕ್ಷರದಾಸೋಹ ಅಧಿಕಾರಿ ಉದಯಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಕಿರಣ್‍ಕುಮಾರ್, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಯ್ಯ, ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಸುಂದರೇಶ್, ರಾಜಶೇಖರ್, ಜಗದೀಶ್, ಕೋಟೆ ಶಂಕರ್, ಶಾಲಾ ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಲಕ್ಷ್ಮಣ್ ರಾಜ ಅರಸ್, ವಿಲ್ಮಾ, ವನಜಾಕ್ಷಿ, ಎಸ್.ಈ. ಲೋಕೇಶ್ವರಾಚಾರ್, ಕಾಳಯ್ಯ, ದಶರಥರಾಜ ಅರಸ್ ಉಪಸ್ಥಿತರಿದ್ದರು.










