ಆಗಸ್ಟ್ 23 ಇನ್ನು ಮುಂದೆ ‘ರಾಷ್ಟ್ರೀಯ ಬಾಹ್ಯಾಕಾಶ ದಿನ’ : ಮೋದಿ ಘೋಷಣೆ…

71
firstsuddi

ಬೆಂಗಳೂರು: ಚಂದ್ರಯಾನ-3 ಯೋಜನೆ ಯಶಸ್ವಿಯಾಗಿ, ವಿಕ್ರಮ್ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡ್ ಆದ ದಿನದ ನೆನಪಿಗಾಗಿ ಆಗಸ್ಟ್ 23 ಅನ್ನು ಇನ್ನು ಮುಂದೆ ‘ರಾಷ್ಟ್ರೀಯ ಬಾಹ್ಯಾಕಾಶ ದಿನ’ವನ್ನಾಗಿ ಆಚರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದಾರೆ.

ಇದೇ ವೇಳೆ ಮತ್ತೆರಡು ವಿಶೇಷ ಘೋಷಣೆಗಳನ್ನು ಮಾಡಿದ್ದಾರೆ. ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿದ ಜಾಗಕ್ಕೆ ‘ಶಿವಶಕ್ತಿ ಪಾಯಿಂಟ್’ ಎಂದು ಹಾಗೂ ಚಂದ್ರಯಾನ -2 ಪತನವಾದ ಸ್ಥಳಕ್ಕೆ ‘ತಿರಂಗ ಪಾಯಿಂಟ್’ ಎಂದು ನಾಮಕರಣ ಮಾಡಿದ ಮೋದಿ ಅವರು, ಈ ತಿರಂಗ ಪಾಯಿಂಟ್ ಮುಂದಿನ ಸಾಧನೆಗಳಿಗೆ ಪ್ರೇರಣೆಯಾಯಿತು. ಚಂದ್ರಯಾನ-3 ಯಶಸ್ಸಿನಲ್ಲಿ ಇಸ್ರೋ ಸಾಧನೆ ದೊಡ್ಡದು. ಮೇಕ್ ಇನ್ ಇಂಡಿಯಾ ಚಂದ್ರನವರೆಗೂ ತಲುಪಿದೆ. ವಿಜ್ಞಾನಿಗಳ ಸಾಧನೆ ದೇಶದ ಪ್ರತಿಯೊಬ್ಬರಿಗೂ ತಿಳಿಯಬೇಕಿದೆ. ಚಂದ್ರಯಾನ-3 ರ ಯಶಸ್ಸಿನಿಂದ ಯುವ ಪೀಳಿಗೆಗೆ ನಿರಂತರವಾಗಿ ಪ್ರೇರಣೆ ಸಿಗಲಿದೆ. ಹೀಗಾಗಿ ಆಗಸ್ಟ್ 23ನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನ ಎಂದು ಘೋಷಣೆ ಮಾಡಲಾಗುವುದು ಎಂದು ಹೇಳಿದರು.

ಚಂದ್ರಯಾನ-3 ಮಿಷನ್‍ನ ಯಶಸ್ಸಿನ ಬಳಿಕ ಖಾಸಗಿ ಬಾಹ್ಯಾಕಾಶ ಉಡಾವಣೆಗಳು ಮತ್ತು ಸಂಬಂಧಿತ ಉಪಗ್ರಹ ಆಧಾರಿತ ವ್ಯವಹಾರಗಳಲ್ಲಿ ಹೂಡಿಕೆಯನ್ನು ಉತ್ತೇಜಿಸಲಿದೆ. ಈ ಮೂಲಕ ಕೇಂದ್ರದ ಮಹತ್ವಾಕಾಂಕ್ಷೆಯ ಮೇಕ್ ಇನ್ ಇಂಡಿಯಾ ಕಾರ್ಯಕ್ರಮವನ್ನು ಉತ್ತೇಜಿಸುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.